ಪಂಜಾಬಿನಲ್ಲಿನ್ನು ಎಲ್ಲ ಜಾತಿಗಳಿಗೆ ಸಾಮಾನ್ಯ ರುದ್ರಭೂಮಿ ನಿರ್ಮಾಣ
ಚಂಡಿಗಡ,ಮೇ 15: ಜಾತಿ ಆಧಾರಿತ ತಾರತಮ್ಯವನ್ನು ನಿವಾರಿಸುವ ಪ್ರಯತ್ನಗಳ ಅಂಗವಾಗಿ ಪಂಜಾಬಿನಲ್ಲಿ ಎಲ್ಲ ಜಾತಿಗಳ ಸದಸ್ಯರಿಗೆ ಸಾಮಾನ್ಯ ರುದ್ರಭೂಮಿಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ರಾಜೇಶ ಬಾಗಾ ಅವರು ರವಿವಾರ ಇಲ್ಲಿ ತಿಳಿಸಿದರರು. ಆಯೋಗದ ಶಿಫಾರಸಿನ ಮೇರೆಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯು ಈ ಬಗ್ಗೆ ಯೋಜನೆಯೊಂದನ್ನು ರೂಪಿಸಿದ್ದು, ವಿದ್ಯುತ್ ಚಿತಾಗಾರಗಳ ಅಗತ್ಯಕ್ಕೂ ಒತ್ತು ನೀಡಲಾಗಿದೆ ಎಂದರು.
ಪಂಜಾಬಿನ ಹೆಚ್ಚಿನ ಗ್ರಾಮಗಳಲ್ಲಿ ಪ್ರತಿ ಸಮುದಾಯಗಳೂ ತಮ್ಮದೇ ಆದ ಪ್ರತ್ಯೇಕ ರುದ್ರಭೂಮಿಗಳನ್ನು ಹೊಂದಿದ್ದು, ಅವುಗಳ ನಿರ್ವಹಣೆಗೆ ಸರಕಾರದಿಂದ ಅನುದಾನವನ್ನೂ ಪಡೆಯುತ್ತಿವೆ ಎಂದ ಬಾಗಾ, ಈ ಪ್ರವೃತ್ತಿಗೆ ಅಂತ್ಯ ಹಾಡಲು ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿನ ಜನಸಂಖ್ಯೆಗೆ ಸಾಲುತ್ತದೆಯೆಂದಾದರೆ ಒಂದೇ ಸಾಮಾನ್ಯ ರುದ್ರಭೂಮಿಯನ್ನು ಸ್ಥಾಪಿಸಬೇಕು ಎಂದರು.
ಸಾಮಾನ್ಯ ರುದ್ರಭೂಮಿಗಳನ್ನು ಸ್ಥಾಪಿಸಲು ಬಯಸುವ ಗ್ರಾಮಗಳಿಗೆ ಪ್ರತಿಯೊಂದಕ್ಕೂ ಐದು ಲಕ್ಷ ರೂ.ಅನುದಾನ ನೀಡಲಾಗುವುದು ಎಂದೂ ಅವರು ತಿಳಿಸಿದರು.