×
Ad

ಬಿಷಪ್ ರೆ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜರ ಧರ್ಮಾಧ್ಯಕ್ಷ ಸೇವೆಯ ವಿಂಶತಿ ಆಚರಣೆ

Update: 2016-05-15 21:04 IST

ಮಂಗಳೂರು, ಮೇ 15: ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಇಂದು ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತದ ಬಿಷಪ್ ರೆ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಬಿಷಪ್ ಪದವಿ ಸ್ವೀಕರಿಸಿ ಎರಡು ದಶಕಗಳಾದ ಸಂದರ್ಭದಲ್ಲಿ ಅವರ ಧರ್ಮಾಧ್ಯಕ್ಷ ಸೇವೆಯ ವಿಂಶತಿ ಆಚರಣೆ ನಡೆಯಿತು.

ಬಿಷಪರಾದ ಉಡುಪಿಯ ರೆ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿಯ ರೆ.ಡಾ.ಹೆನ್ರಿ ಡಿಸೋಜಾ, ಬೆಳಗಾವಿಯ ಪೀಟರ್ ಮಚಾದೊ, ಬೆಳ್ತಂಗಡಿಯ ರೆ.ಡಾ.ಲಾರೆನ್ಸ್ ಮುಕ್ಕುಝಿ, ಇಟಾನಗರದ ರೆ.ಡಾ. ಜಾನ್ ಥೋಮಸ್, ದಿಲ್ಲಿಯ ನಿವೃತ್ತ ಆರ್ಚ್ ಬಿಷಪ್ ರೆ.ಡಾ. ವಿಕ್ಟರ್ ಕೊನ್ಸೆಸೊ ಉಪಸ್ಥಿತಿಯಲ್ಲಿ ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜರು ಎರಡು ದಶಕಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿದ ಪ್ರಯುಕ್ತ ಕೃತಜ್ಞತಾರ್ಪಣೆಯ ಬಲಿಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ಹೆನ್ರಿ ಡಿಸೋಜಾ, ಧಾರ್ಮಿಕ ಮುಖಂಡರ ಗೌರವ ಮತ್ತು ಘನತೆಗಳು ಅವರ ಸಾತ್ವಿಕ ಜೀವನ, ಜನರಿಗಾಗಿ ಜನರೊಂದಿಗೆ ಬೆರೆತು ಎಸಗುವ ಸಮಾಜಮುಖಿ ಕೆಲಸಗಳನ್ನು ಹಾಗೂ ಅವರಿಂದ ಗಳಿಸುವ ಪ್ರೀತಿಯನ್ನು ಅವಲಂಬಿಸಿರುತ್ತದೆ. ಬಿಷಪ್ ಅಲೋಶಿಯಸ್‌ರು ತಮ್ಮ 20 ವರ್ಷಗಳ ಸೇವಾವಧಿಯಲ್ಲಿ ವಿಶಿಷ್ಟವಾದ ಕಾರ್ಯವೈಖರಿಯ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಮಾತನಾಡಿ, ದೇವರು ನನ್ನ ಮೇಲೆ ವಿಶ್ವಾಸವಿರಿಸಿ ಧರ್ಮಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಅದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ . ಕಳೆದ 20 ವರ್ಷಗಳ ಅವಧಿಯಲ್ಲಿ ಉತ್ಸಾಹದಿಂದ, ನಿಸ್ವಾರ್ಥ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಈ ಅವಧಿಯಲ್ಲಿ ಧರ್ಮ ಪ್ರಾಂತ ವ್ಯಾಪ್ತಿಯಲ್ಲಿ ಹತ್ತು ಹಲವು ಒಳ್ಳೆಯ ಕಾರ್ಯಗಳು ನಡೆದಿವೆ. ಮುಖ್ಯವಾಗಿ ಜನರಲ್ಲಿ ಕ್ರೈಸ್ತ ವಿಶ್ವಾಸ ಮತ್ತು ಧಾರ್ಮಿಕ ಭಕ್ತಿ ಉದ್ದೀಪಿಸಲು ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.

ಕಾರ್ಮೆಲ್ ಸಂಸ್ಥೆಯ ಪಿಯುಸ್ ಜೇಮ್ಸ್ ಡಿಸೋಜಾ ಅವರು ಬೈಬಲ್ ವಾಚಿಸಿದರು. ಬಲಿಪೂಜೆಯ ಬಳಿಕ ಜರಗಿದ ಅಭಿನಂದನಾ ಸಮಾರಂಭದಲ್ಲಿ ಧರ್ಮಪ್ರಾಂತದ ಪ್ರಧಾನ ಗುರು ಡೆನಿಸ್ ಮೊರಾಸ್ ಪ್ರಭು ಸಮ್ಮಾನ ಪತ್ರ ವಾಚಿಸಿ ಅದನ್ನು ಬಿಷಪ್ ಅಲೋಶಿಯಸ್ ರಿಗೆ ಅರ್ಪಿಸಿದರು. ಬಿಷಪ್ ವಿಕ್ಟರ್ ಕೊನ್ಸೆಸೊ ಹೂಗುಚ್ಛ ನೀಡಿ ಅಭಿನಂದಿಸಿದರು.

ಸಮಸ್ತ ಧರ್ಮಗುರುಗಳ ಪರವಾಗಿ ಜಪ್ಪು ಸೆಮಿನರಿಯ ರೆಕ್ಟರ್ ಮಾರ್ಟಿಸ್, ಧರ್ಮ ಭಗಿನಿಯರ ಪರವಾಗಿ ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಿ. ಶಾಲಿನಿ, ಸಮಸ್ತ ಕ್ರೈಸ್ತ ವಿಶ್ವಾಸಿಗಳ ಪರವಾಗಿ ಧರ್ಮ ಪ್ರಾಂತದ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅಭಿನಂದಿಸಿದರು. 2015 ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿಡ್ಡೋಡಿಯ ಮಿಶಾಲ್ ಕ್ವೀನಿ ಡಿಕೋಸ್ತಾರನ್ನು ಧರ್ಮ ಪ್ರಾಂತದ ಪರವಾಗಿ ಬಿಷಪರು ಅಭಿನಂದಿಸಿದರು.

ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಡೆನಿಸ್ ಮೊರಾಸ್ ಪ್ರಭು, ಮೊ. ಎಡ್ವಿನ್ ಪಿಂಟೊ, ಮೊ. ಲೆಸ್ಲಿ ಶೆಣೈ, ಬಿಷಪ್ ಅಲೋಶಿಯಸ್‌ರ ಹಿರಿಯ ಸೋದರ ದಿಲ್ಲಿಯ ನಿವೃತ್ತ ಗುರು ಚಾರ್ಲ್ಸ್ ಡಿಸೋಜ, ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಲಿಯಂ ಮಿನೇಜಸ್, ರೊಜಾರಿಯೋ ಕೆಥೆಡ್ರಲ್‌ನ ಪ್ರಧಾನ ಗುರು ಜೆ. ಬಿ. ಕ್ರಾಸ್ತಾ , ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಬಿಷಪ್ ಕುಟುಂಬ ಸದಸ್ಯರು, ರೊಜಾರಿಯೋ ಕೆಥೆಡ್ರಲ್ ಮತ್ತು ವಿವಿಧ ಭಾಗಗಳಿಂದ ಕ್ರೈಸ್ತರು, ಧರ್ಮ ಭಗಿನಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ  ವಿಜಯ್ ಮಚಾದೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News