×
Ad

ಕಾರಿನ ಮೇಲೆ ಉರುಳಿದ ತಾಳೆಮರ: ಇಬ್ಬರಿಗೆ ಗಾಯ

Update: 2016-05-15 21:41 IST

ಬಂಟ್ವಾಳ, ಮೇ 17: ರವಿವಾರ ಸಂಜೆಯ ಬಳಿಕ ಬೀಸಿದ ಭಾರಿ ಗಾಳಿಗೆ ಕಾರಿನ ಮೇಲೆ ತಾಳೆ ಮರವೊಂದು ಉರುಳಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಸೂರಿಕುಮೇರು ಸಮೀಪದ ಬೊಳ್ಳಿಕಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಕಡೇಶ್ವಲ್ಯದ ನಿವಾಸಿ ಮೋಹನ, ಮೂಡಿಗೆರೆ ನಿವಾಸಿ ಮೋಹನ ಗಾಯಗೊಂಡವರು. ಇವರು ಕಲ್ಲಡ್ಕದಿಂದ ಸೂರಿಕುಮೇರು ಕಡೆಗೆ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ರವಿವಾರ ಸಂಜೆ 7ರಿಂದ ಸುಮಾರು ಒಂದೂವರೆ ಗಂಟೆ ಕಾಲ ಬೀಸಿದ ಬಿರುಗಾಳಿಗೆ ಹೆದ್ದಾರಿ ಬಳಿ ಇದ್ದ ತಾಳೆ ಮರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಲ್ಟೋ ಕಾರಿನ ಮೇಲೆ ಉರುಳಿ ಬಿದ್ದಿದೆ. ಈ ದುರ್ಘಟನೆಯಿಂದ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾನಿ: ರವಿವಾರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಬಂಟ್ವಾಳ ತಾಲೂಕಿನ ಸೂರಿಕುಮೇರು, ಕಡೇಶ್ವಲ್ಯ, ಬೊಳ್ಳಿಕಲ್ಲು ಮೊದಲಾದ ಪ್ರದೇಶಗಳಲ್ಲಿ ಮರಗಳು ಉರುಳಿಬಿದ್ದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕೆಲವೆಡೆ ವಿದ್ಯುಕಂಬಗಳು ಧರಾಶಾಹಿಯಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿಯಾಗಿರುವುದರಿಂದ ದುರಸ್ತಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಬೆಳಗಿನವರೆಗೆ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲೇ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

ರವಿವಾರ ಮುಂಜಾನೆ ಸುರಿದ ಮಳೆ ಹಾಗೂ ಗಾಳಿ, ಸಿಡಿಲು, ಮಿಂಚಿಗೆ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಪುಟ್ಟನಳಿಕೆ ಹಾಗೂ ಕಾಡಬೆಟ್ಟು ಗ್ರಾಮದ ನಿವಾಸಿ ಶ್ರೀನಿವಾಸ ಎಂಬವರ ಮನೆಗೆ ಹಾನಿಯಾಗಿದ್ದು ಸುಮಾರು 40 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗಡೆ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 8 ಗಂಟೆಯಿಂದ ರವಿವಾರ ಬೆಳಗ್ಗಿನ 8 ಗಂಟೆಯ 12 ಗಂಟೆಯವರೆಗಿನ ಅವಧಿಯಲ್ಲಿ ತಾಲೂಕಿನಾದ್ಯಂತ 56.2 ಮಿ.ಮೀ. ಮಳೆಯಾಗಿದೆ. ಒಟ್ಟು ತಾಲೂಕಿನಾದ್ಯಂತ 397.4 ಮಿ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ಕಚೇರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News