×
Ad

ಉಚ್ಚಿಲ: ತ್ಯಾಜ್ಯ ವಿಲೇವಾರಿ, ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಮೌನ ಪ್ರತಿಭಟನೆ

Update: 2016-05-15 21:54 IST

ಉಳ್ಳಾಲ, ಮೇ 15: ಉಚ್ಚಿಲ ಹೊಳೆಯ ತ್ಯಾಜ್ಯ ವಿಲೇವಾರಿ ಹಾಗೂ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಉಚ್ಚಿಲದ ನಾಗರಿಕ ಸಮಿತಿ ಯುವ ವೇದಿಕೆಯ ಆಶ್ರಯದಲ್ಲಿ ಉಚ್ಚಿಲ ಹೊಳೆ ದಡದಲ್ಲಿ ರವಿವಾರ ಮೌನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಪ್ರಕೃತಿ ಬಿಸಿಯೇರಿ ಕುಡಿಯುವ ನೀರಿಗೆ ತತ್ವಾರ ಇರುವಂತಹ ಸ್ಥಿತಿಯಲ್ಲಿ ನೀರಿಗೆ ಪೂರಕವಾಗಿರುವ ಹೊಳೆಯನ್ನು ಮಲಿನಗೊಳಿಸಿ ಅಂತರ್ಜಲ ಕುಸಿಯುವಂತೆ ಮಾಡಿರುವುದು ದುರದೃಷ್ಟಕರ. ಈ ಬಗ್ಗೆ ಸ್ಥಳೀಯಾಡಳಿತ ಶೀಘ್ರವೇ ಎಚ್ಚೆತ್ತು ಮಲಿನಗೊಳಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದರು.

ಮಾಲಿನ್ಯದಿಂದಾಗಿ ರೋಗಗಳು ಉಂಟಾಗಲು ಸ್ಥಳೀಯಾಡಳಿತವೇ ಹೊಣೆಯಾಗುತ್ತದೆ. ಅಂಗಡಿ ಮಾಲಕರಿಗೆ, ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಮೂಲಕ ಹೊಳೆಯನ್ನು ಸ್ವಚ್ಛವಾಗಿಡಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಬೇಕಿದೆ. ಜನ ಆರೋಗ್ಯವಂತರಾಗಿ ವ್ಯವಸ್ಥಿತವಾಗಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ನಾಗರಿಕ ಸಮಿತಿ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಮಾತನಾಡಿ, ಉಚ್ಚಿಲ ಭಾಗದಲ್ಲಿ ಶಾಶ್ವತವಾಗಿ ಕುಡಿಯಲು ನೀರಿಲ್ಲ. ಹೊಳೆಯ ಸಮೀಪದ ಬಾವಿಗಳಲ್ಲಿ ಮಲಿನಯುಕ್ತ ನೀರು ಇರುವುದರಿಂದ ಜನರು ಗಂಟಲು ನೋವು ಸಹಿತ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಂಬಂಧಿಸಿದ ಪಂಚಾಯತ್‌ಗೆ ಮೊರೆ ಹೋದರೆ, ಅದು ಪಂಚಾಯತ್ ಸದಸ್ಯರ ಕೆಲಸ ಅನ್ನುತ್ತಿದ್ದಾರೆ. ಸದಸ್ಯರನ್ನು ಕೇಳಿದಾಗ ಕೂಲಿ ಕೆಲಸ ಮಾಡಿ ಬದುಕುವ ನಾವು ಹಿಂದೆ ಮಾಡಿದ ಕೆಲಸದ ಹಣ ಬಾರದೆ ರೋಸಿ ಹೋಗಿದ್ದೇವೆ ಅನ್ನುತ್ತಿದ್ದಾರೆ. ಅದಕ್ಕಾಗಿ ಸ್ನೇಹಿತರು ಹಾಗೂ ಸ್ಥಳೀಯರು ಸೇರಿಕೊಂಡು ಸ್ಥಳೀಯವಾಗಿ ಇರುವ ಪಂಚಾಯತ್ ಬಾವಿಯನ್ನು ನೀರಿಗಾಗಿ ಕೊರೆಯಲು ಮುಂದಾದಲ್ಲಿ ಪಂಚಾಯತ್ ಅಧ್ಯಕ್ಷರು ಅದು ಕಾನೂನು ಬಾಹಿರ ಅನ್ನುತ್ತಿದ್ದಾರೆ. ಆದರೆ ಕುಡಿಯುವ ನೀರಿಗಾಗಿ ಕಾನೂನು ಬಾಹಿರ ಕೆಲಸವನ್ನು ಮಾಡಿ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದರು.

ಈ ಸಂದರ್ಭ ನಾಗರಿಕ ಸಮಿತಿ ಅಧ್ಯಕ್ಷ ಕೃಷ್ಣ ಎನ್. ಉಚ್ಚಿಲ್, ಸ್ಥಳೀಯರಾದ ಪೊಡಿಮೋನು, ಇಬ್ರಾಹೀಂ ಕಟ್ಟೆಪುಣಿ, ತಾ.ಪಂ. ಸದಸ್ಯ ಸಿದ್ಧೀಕ್ ತಲಪಾಡಿ, ಡೈಮಂಡ್ ವೆಲ್ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಸಂಶುದ್ದೀನ್, ಫ್ರೆಂಡ್ಸ್ ಉಚ್ಚಿಲದ ಅಧ್ಯಕ್ಷ ನಝೀರ್ ಉಚ್ಚಿಲ್, ಮುಬಾರಕ್ ವೆಲ್ಫೇರ್ ಅಸೋಸಿಯೇಷನ್‌ನ ಮೌಸೀನ್ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News