ಇರಾಕ್ ಅನಿಲ ಸ್ಥಾವರದಲ್ಲಿ ಆತ್ಮಹತ್ಯಾ ದಾಳಿ : ಕನಿಷ್ಠ 12 ಮಂದಿ ಬಲಿ

Update: 2016-05-15 17:31 GMT

ಬಾಗ್ದಾದ್, ಮೇ 15: ಇರಾಕ್ ರಾಜಧಾನಿ ಬಗ್ದಾದ್‌ನ ಉತ್ತರದಲ್ಲಿರುವ ನೈಸರ್ಗಿಕ ಅನಿಲ ಸ್ಥಾವರವೊಂದರ ಮೇಲೆ ಐಸಿಸ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.

   ಬಗ್ದಾದ್‌ನಿಂದ 20 ಕಿ.ಮೀ. ದೂರದ ತಾಜಿ ಪಟ್ಟಣದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಾತ ತನ್ನನ್ನು ತಾನೇ ಸ್ಫೋಟಿಸಿಕೊಂಡ. ಆನಂತರ ಹಲವಾರು ಉಗ್ರರು ಸ್ಥಾವರದೊಳಗೆ ನುಗ್ಗಿ ಭದ್ರತಾಪಡೆಗಳ ಜೊತೆ ಕಾಳಗ ನಡೆಸಿದರು. ಘಟನೆಯಲ್ಲಿ 25 ಮಂದಿ ಭದ್ರತಾಸಿಬ್ಬಂದಿಗೆ ಗಾಯಗಳಾಗಿವೆ.

  ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದು, ‘ಖಲೀಫೆಟ್ ಸೈನಿಕರ’ ಗುಂಪೊಂದು ಈ ಆಕ್ರಮಣ ನಡೆಸಿರುವುದಾಗಿ ಭಯೋತ್ಪಾದಕ ಗುಂಪಿನ ಸುದ್ದಿಸಂಸ್ಥೆ ‘ಆಮಾಕ್’ ತಿಳಿಸಿದೆ. ಸ್ಫೋಟಗಳ ಬಳಿಕ ಸ್ಥಾವರದಲ್ಲಿ ಭುಗಿಲೆದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕದಳದ ಸಿಬ್ಬಂದಿಗಳು ಸಫಲರಾಗಿದ್ದಾರೆಂದು ಇರಾನ್‌ನ ಉಪ ತೈಲ ಸಚಿವ ಹಾಮಿದ್ ಯೂನಿಸ್ ತಿಳಿಸಿದ್ದಾರೆ.

ಕಳೆದ ಬುಧವಾರದಿಂದ ಐಸಿಸ್ ಉಗ್ರರು ಬಗ್ದಾದ್ ಹಾಗೂ ಇರಾಕ್‌ನ ವಿವಿಧೆಡೆ ನಡೆಸಿದ ಭಯೋತ್ಪಾದಕ ದಾಳಿಗಳಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News