ವಿಶ್ವಕರ್ಮ ಕಾರ್ಪೆಂಟರ್ಸ್ ಯೂನಿಯನ್ ವಾರ್ಷಿಕೋತ್ಸವ
ಉಡುಪಿ, ಮೇ 15: ಉಡುಪಿ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ಸ್ ಯೂನಿಯನ್‌ನಪ್ರಥಮ ವಾರ್ಷಿಕೋತ್ಸವವು ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ರವಿವಾರ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಯುವ ಒಕ್ಕೂಟದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಮಾತನಾಡಿ, ಸರಕಾರ ನಮ್ಮತ್ತ ಕಣ್ತೆರೆದು ನೋಡುವಂತಾಗಬೇಕಾದರೆ ಮೊದಲು ನಾವು ನಮ್ಮ ಬಲ ತೋರಿಸಬೇಕು. ಅದಕ್ಕೆ ಸಂಘಟನೆ ಅತೀ ಮುಖ್ಯ. ಇದರಿಂದ ಎಲ್ಲ ರೀತಿಯ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ಯೂನಿಯನ್‌ನ ಉಡುಪಿ ತಾಲೂಕು ಗೌರವಾಧ್ಯಕ್ಷ ಬಳ್ಕೂರು ಡಾ.ಗೋಪಾಲ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರ್ಡೂರು ಉಪವಲಯ ಅರಣ್ಯಾಕಾರಿ ಕರುಣಾಕರ ಜೆ.ಆಚಾರ್ಯ, ನಿವೃತ್ತ ಪ್ರಾಂಶುಪಾಲ ಸತೀಶ್ ಶೆಟ್ಟಿ ಕುಂದಾಪುರ, ನಿವೃತ್ತ ತಹಶೀಲ್ದಾರ್ ಕೆ.ಮುರಳೀಧರ್ ಮಾತನಾಡಿದರು.
ಯೂನಿಯನ್ ಅಧ್ಯಕ್ಷ ಶ್ರೀಧರ್ ಆಚಾರ್ಯ ಕರಂಬಳ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಕರ ಬೈಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಆಚಾರ್ಯ ಸ್ವಾಗತಿಸಿದರು. ಭಾರತಿ ಜಯಕರ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.