ಮಾಲೆಗಾಂವ್ ಸ್ಫೋಟ ಪ್ರಕರಣ ಸುಪ್ರೀಂ ನಿಗಾದಲ್ಲಿ ತನಿಖೆಯಾಗಲಿ: ಕಾಂಗ್ರೆಸ್ ಆಗ್ರಹ

Update: 2016-05-15 18:16 GMT

ಹೊಸದಿಲ್ಲಿ, ಮೇ 15: ಮಾಲೆಗಾಂವ್ ಸ್ಫೋಟ(2008) ಪ್ರಕರಣದ ಸಂಬಂಧ ಎನ್‌ಐಎ ದಾಖಲಿಸಿರುವ ಹೊಸ ಆರೋಪ ಪಟ್ಟಿಯು ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ಬದ್ಧತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನಿರಿಸಿದೆಯೆಂದು ಕಾಂಗ್ರೆಸ್ ರವಿವಾರ ಹೇಳಿದ್ದು, ಸುಪ್ರೀಂ ಕೋರ್ಟ್‌ನ ನಿಗಾದಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.

ಸುಪ್ರೀಂ ಕೋರ್ಟ್‌ಗೆ ತನಿಖೆಯ ಮೇಲ್ವಿಚಾರಣೆ ನಡೆಸಲು ಅವಕಾಶ ನೀಡುವ ಮೂಲಕ ತನ್ನ ಸಾಂವಿಧಾನಿಕ ಪ್ರತಿಜ್ಞೆಯನ್ನು ಎತ್ತಿ ಹಿಡಿಯುವಂತೆ ವಿರೋಧ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದೆ.

ರಾಷ್ಟ್ರೀಯ ತನಿಖೆ ಸಂಸ್ಥೆಯು(ಎನ್‌ಐಎ) ‘ನಮೋ ತನಿಖೆ ಸಂಸ್ಥೆಯಾಗಿದೆ’. ಆರೋಪ ಪಟ್ಟಿಯು, ಹೇಮಂತ ಕರ್ಕರೆ ನೇತೃತ್ವದ ಮುಂಬೈ ಎಟಿಎಸ್ ನಡೆಸಿದ್ದ ಕೂಲಂಕಷ ತನಿಖೆಯನ್ನು ಸರ್ವನಾಶಗೊಳಿಸುವ ಗುರಿಯಿರಿಸಿರುವಂತೆ ತೋರುತ್ತಿದೆಯೆಂದು ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೊಸದಿಲ್ಲಿಯಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಆರೋಪಿಸಿದ್ದಾರೆ.

ಎಟಿಎಸ್ ದಾಖಲಿಸಿಕೊಂಡಿದ್ದ ಎಲ್ಲ ಹೇಳಿಕೆಗಳನ್ನು ಸಾಕ್ಷವಾಗಿ ಅಂಗೀಕರಿಸದಿರುವಂತೆ ನೋಡಿಕೊಳ್ಳಲು ತನಿಖೆ ಸಂಸ್ಥೆಯು ಮೊಕಾ ಆರೋಪಗಳನ್ನು ಕೈಬಿಟ್ಟಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.

ಸಾಧ್ವಿ ಪ್ರಜ್ಞಾಸಿಂಗ್ ಸಹಿತ 6 ಮಂದಿ ಆರೋಪಿಗಳ ಖುಲಾಸೆಗೆ ಕಾರಣವಾದ‘ಹಠಾತ್ ನಿಲುವು ಬದಲಾವಣೆ’ ಹಾಗೂ ಮೊಕಾ ಮತ್ತಿತರ ಆರೋಪಗಳನ್ನು ಕೈಬಿಡುವ ಮೂಲಕ ಇತರ ಆರೋಪಿಗಳ ವಿರುದ್ಧದ ಪ್ರಕರಣವನ್ನು ‘ದುರ್ಬಲ’ ಗೊಳಿಸಿದ ಬಗ್ಗೆ ಸುಪ್ರೀಂಕೋರ್ಟ್‌ನ ನಿಗಾದಲ್ಲಿ ತನಿಖೆ ನಡೆಸುವಂತೆ ಶರ್ಮಾ ಆಗ್ರಹಿಸಿದ್ದಾರೆ.

ಬೆಳವಣಿಗೆಯು ಭಾರತದ ಸಮಗ್ರತೆ ಹಾಗೂ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅದರ ಬದ್ಧತೆಯ ಕುರಿತು ಪ್ರಶ್ನೆಯನ್ನೆತ್ತಿದೆ. ಭಾರತವು ದಶಕಗಳಿಂದಲೂ ಸಂಘಟಿತ ಹಾಗೂ ಗುರಿಯಿರಿಸಿದ ಭಯೋತ್ಪಾದನೆಯ ಬಲಿಪಶುವಾಗಿದೆ. ಅದು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬದ್ಧವಾಗಿದೆ. ತಾವು ಎಲ್ಲ ವಿಧದ ಹಾಗೂ ಎಲ್ಲ ರೂಪಗಳ ಭಯೋತ್ಪಾದನೆಯನ್ನು ಖಂಡಿಸುತ್ತೇವೆಂದು ಅವರು ಹೇಳಿದ್ದಾರೆ.

ಎನ್‌ಐಎಯ ಹೊಸ ನಿಲುವಿನಿಂದಾಗಿ ಸರಕಾರವು ಕರ್ಕರೆಯವರ ಬಲಿದಾನವನ್ನು ನಿರಾಕರಿಸುತ್ತಿದೆಯೇ ಎಂದು ಪ್ರಶ್ನಿಸಿದ ಶರ್ಮಾ, ಸ್ವತಃ ಮೋದಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಸರಕಾರವು ತನ್ನ ಸಿದ್ಧಾಂತವನ್ನು ಅನುಸರಿಸುವವರು ಹಾಗೂ ತನ್ನ ಸಹ ಸಂಘಟನೆಗಳಿಗೆ ಸೇರಿದವರು ಯಾವುದೇ ಆರೋಪ ಎದುರಿಸುತ್ತಿದ್ದರೂ ಅವರನ್ನು ರಕ್ಷಿಸಲು ಸತತ ಪ್ರಯತ್ನ ನಡೆಸುತ್ತಿದೆಯೆಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News