ಎತ್ತಿನಹೊಳೆ ಯೋಜನೆ ಕೈಬಿಡಲು ಸರ್ವ ಧರ್ಮ ನಾಯಕರ ಒಕ್ಕೊರಲ ಆಗ್ರಹ
ಮಂಗಳೂರು, ಮೇ 16: ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಗೆ ಅಪಾಯ ಸಂಭವಿಸಲಿದೆ ಎಂಬ ಆತಂಕದೊಂದಿಗೆ ಯೋಜನೆಯನ್ನು ವಿರೋಧಿಸಿ ಇಂದು ಮಂಗಳೂರು ನಗರದಲ್ಲಿ ಸರ್ವ ಧರ್ಮಗಳ ನಾಯಕರಿಂದ ವಿರೋಧ ವ್ಯಕ್ತವಾಯಿತು. ಮಾತ್ರವಲ್ಲದೆ ಯೋಜನೆಯನ್ನು ಕೈಬಿಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಆಯೋಜಿಸಲಾದ ಎತ್ತಿನಹೊಳೆ ಯೋಜನೆ ವಿರೋಧಿಸಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಜಾಥಾ ಹಾಗೂ ಪ್ರತಿಭಟನಾ ಸಭೆಯಲ್ಲಿ ವಿವಿಧ ಧರ್ಮ, ಪಕ್ಷ, ಸಂಘಟನೆಗಳ ನಾಯಕರು ಭಾಗವಹಿಸುವ ಮೂಲಕ ಗಮನ ಸೆಳೆದರು.
ಎತ್ತಿನಹೊಳೆ ಯೋಜನೆ ಎಂಬ ಹೆಸರಿನಲ್ಲಿ ನೇತ್ರಾವತಿ ನದಿಯ ನೀರನ್ನು ಬೆಂಗಳೂರು, ಕೋಲಾರ, ತುಮಕೂರು ಮೊದಲಾದ ಜಿಲ್ಲೆಗಳಿಗೆ ಹರಿಸುವ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂಬ ಆಗ್ರಹ ಪ್ರತಿಭಟನೆಯ ಸಂದರ್ಭ ನಾಯಕರಿಂದ ವ್ಯಕ್ತವಾಯಿತು. ಮಧ್ಯಾಹ್ನ 3 ಗಂಟೆಯಿಂದ ಆರಂಭಗೊಂಡ ಜಾಥಾ ನಾಲ್ಕು ಗಂಟೆಯ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿ ಅಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಜಿಲ್ಲಾಧಿಕಾರಿ ಬರುವವರೆಗೂ ಕಾದ ಪ್ರತಿಭಟನಾಕಾರರು
ಪ್ರತಿಭಟನಾ ಸಭೆಯ ಆರಂಭದಲ್ಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನಗರದ ಕುಡಿಯುವ ನೀರಿನ ಸಂಬಂಧ ಸರ್ಕ್ಯೂಟ್ ಹೌಸ್‌ನಲ್ಲಿ ಸಭೆಯಲ್ಲಿದ್ದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸುತ್ತಾರೆಂಬ ಸಂದೇಶವನ್ನು ಪೊಲೀಸರ ಮೂಲಕ ಪ್ರತಿಭಟನಾಕಾರರಿಗೆ ನೀಡಲಾಯಿತು. ಆದರೆ ಖುದ್ದು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಆಗಮಿಸುವವರೆಗೆ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು. ಈ ಸಂದರ್ಭ ವೇದಿಕೆಯ ಕೆಳಗಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಎರಡು ಬಾರಿ ಬಂದ್ ಮಾಡಲಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಗೇಟಿನ ಮೂಲಕ ಘೋಷಣೆಗಳನ್ನು ಕೂಗುತ್ತಾ ಒಳನುಗ್ಗಲು ಯತ್ನಿಸಿದರು. ಈ ಸಂದರ್ಭ ನಾಯಕರೇ ಪ್ರತಿಭಟನಾ ನಿರತರ ಮನವೊಲಿಸಿ ಘೋಷಣೆ ಕೂಗದಂತೆ ಮತ್ತು ಅಶಾಂತಿ ಸೃಷ್ಟಿಸದಂತೆ ಮನವಿ ಮಾಡಿದರು. ಪ್ರತಿಭಟನಾ ಸಭೆ ಆರಂಭಗೊಂಡು ಸುಮಾರು ಎರಡೂವರೆ ಗಂಟೆಯ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ, ಮನವಿಯನ್ನು ನಾಳೆಯೇ ಸರಕಾರಕ್ಕೆ ಕಳುಹಿಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಹರಿಕೃಷ್ಣ ಬಂಟ್ವಾಳ್, ಸತ್ಯಜಿತ್ ಸುರತ್ಕಲ್, ದಿನಕರ ಶೆಟ್ಟಿ, ಯೋಗೀಶ್ ಕುಮಾರ್ ಶೆಟ್ಟಿ, ರಹೀಂ ಉಚ್ಚಿಲ್ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಕೇಳಿ ಬಂದ ಗಣ್ಯರ ಮಾತುಗಳು
ನೇತ್ರಾವತಿ ಜಿಲ್ಲೆಯ ಪ್ರಕೃತಿದತ್ತ ಕೊಡುಗೆಯಾಗಿದ್ದು, ಯಾವ ರಾಜಕಾರಣಿಗಳ ಆಸ್ತಿಯೂ ಅಲ್ಲ. ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ಹೋರಾಟ ಮುಂದುವರಿಯಲಿದೆ. ಮಂಗಳೂರಿಗೆ ಭೇಟಿ ನೀಡಿದ ವೇಳೆ ಯೋಜನೆ ಬಗ್ಗೆ ವಿಜ್ಞಾನಿಗಳು, ಹೋರಾಟಗಾರರು, ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಆದರೆ ಇಲ್ಲಿಂದ ವಿಮಾನ ಹತ್ತಿದಾಕ್ಷಣ ಅದನ್ನವರು ಮರೆತಿದ್ದಾರೆ. ತಜ್ಞ ಎಸ್.ಜಿ. ಮಯ್ಯ ಅವರ ಎದುರು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಂವಾದ ನಡೆಯಲಿ
ವಿಜಯ ಕುಮಾರ್ ಶೆಟ್ಟಿ, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ.
ವಿಶ್ವ ಮಾನವ ಧರ್ಮದ ಸಂಘಟನೆ ಇಂದು ಆಗಿದೆ. ನೀರಿಗೆ ಎಲ್ಲವನ್ನೂ ಒಗ್ಗೂಡಿಸುವ ಶಕ್ತಿ ಇದೆ ಎಂಬುದನ್ನು ಪ್ರದರ್ಶಿಸಿದೆ. ಮಂಗಳೂರಿನ ಜನ ಎಚ್ಚರಗೊಳ್ಳಬೇಕು. ಮುಖ್ಯಮಂತ್ರಿ ಇನ್ನಾದರೂ ಸಭೆ ಮಾಡಿ ಜಿಲ್ಲೆಯ ಜನರಿಗೆ ಮಾಹಿತಿ ನೀಡಬೇಕು.
ಗುರುದೇವಾನಂದ ಸ್ವಾಮೀಜಿ, ಒಡಿಯೂರು ಕ್ಷೇತ್ರ.
ಎಲ್ಲಾ ಧರ್ಮದವರು ಕುಡಿಯುವ ನೀರು ಒಂದೇ. ಹಾಗಾಗಿ ಇಂದು ನೀರಿಗಾಗಿ ಒಂದಾಗಿರುವ ಜಿಲ್ಲೆಯ ಜನರು ಸರಕಾರಕ್ಕೆ ಈ ಕುರಿತಾದ ಸೂಚನೆಯನ್ನು ನೀಡುತ್ತಿದ್ದಾರೆ. ಮನುಷ್ಯ ಸೃಷ್ಟಿಯೇ ನೀರು ಮತ್ತು ಮಣ್ಣಿನಿಂದ ಆಗಿರುವುದೆಂಬ ಉಲ್ಲೇಖ ಧರ್ಮಗ್ರಂಥಗಳಲ್ಲೂ ಇದೆ. ಜಿಲ್ಲೆಯ ಜನರ ಆಕ್ರೋಶ ಮುಂದಿನ ದಿನಗಳಲ್ಲಿ ಬಿಸಿ ಮುಟ್ಟಿಸಲಿದೆ.
ಸೈಯದ್ ಇಬ್ರಾಹೀಂ ತಂಙಳ್, ಆತೂರು.
ಮನುಷ್ಯ ನಿರ್ಮಿತ ಧರ್ಮ ನಾಶವಾಗಬಹುದು. ಆದರೆ ಪ್ರಕೃತಿ ನಿರ್ಮಿತ ಧರ್ಮಕ್ಕೆ ನಾಶವಿಲ್ಲ. 9 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಆರಂಭಗೊಂಡ ವಾರಾಹಿ ಯೋಜನೆ 36 ವರ್ಷಗಳ ಬಳಿಕ 560 ಖರ್ಚು ಮಾಡಿದರೂ ಒಂದು ಹನಿ ನೀರು ಹರಿಸಲಾಗಿಲ್ಲ. ಎತ್ತಿನ ಹೊಳೆ ಯೋಜನೆಯಿಂದ ಕೋಲಾರಕ್ಕೆ ನೀರು ಹೋಗುವುದಿಲ್ಲ. ಗುತ್ತಿಗೆ ಆಸೆಗೆ ಜಿಲ್ಲೆಯ ಜನರೇ ಜೀವನದಿಯನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಬಹಿರಂಗಪಡಿಸಲಾಗುವುದು.
ಎಂ.ಜಿ. ಹೆಗಡೆ, ಮಾರ್ಗದರ್ಶಕ ಮಂಡಳಿ ಸದಸ್ಯರು, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ.
ನೇತ್ರಾವತಿ ಇಲ್ಲದ ಜಿಲ್ಲೆಗೆ ಜೀವ ಇಲ್ಲ. ಅದನ್ನು ನಾವೆಲ್ಲಾ ಉಳಿಸಬೇಕು.
ಫಾ. ವಿಲಿಯಂ ಮಿನೇಜಸ್, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವಕ್ತಾರ
ಕೇವಲ ಮನವಿ ನೀಡಿ ಪ್ರಯೋಜನವಾಗದು. ಉಗ್ರ ಹೋರಾಟದ ಅಗತ್ಯವಿದೆ. ಇಂದಿನ ಪ್ರತಿಭಟನೆ, ಸದಾ ಸಂಘರ್ಷಕ್ಕೆ ಹೆಸರಾಗಿರುವ ಜಿಲ್ಲೆಯಲ್ಲಿ ಕೋಮುವಾದ ಮುಕ್ತ ವ್ಯವಸ್ಥೆಯನ್ನು ಪ್ರದರ್ಶಿಸಿದೆ. ಈ ಒಗ್ಗಟ್ಟು ಮುಂದುವರಿಯಬೇಕು.
ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಸಾಂದೀಪನಿ ಮಠ.
ಸೌಹಾರ್ದತೆಗೆ ಹೆಸರಾದ ಜಿಲ್ಲೆ ದಕ್ಷಿಣ ಕನ್ನಡ. ಇದೀಗ ನೀರಿಗಾಗಿ ಮತ್ತೊಮ್ಮೆ ಇಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ. ಸರಕಾರ ಜನರ ಭಾವನೆಗಳಿಗೆ ಗೌರವ ನೀಡಬೇಕು.ಅಲ್‌ಹಾಜ್ ಮುಹಮ್ಮದ್ ಮಸೂದ್, ಅಧ್ಯಕ್ಷರು, ದ.ಕ ಮತ್ತು ಉಡುಪಿ ಮುಸ್ಲಿಮ್ ಸೆಂಟ್ರಲ್ ಕಮಿಟಿ
ಹೋರಾಟ ಕ್ರಾಂತಿಯ ರೂಪದಲ್ಲಿ ಮುಂದುವರಿಯಬೇಕು.
ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ.
ಯೋಜನೆಯನ್ನು ಬೆಂಬಲಿಸುತ್ತಿರುವ ಹಾಗೂ ಯೋಜನೆಯ ಬಗ್ಗೆ ವೌನವಾಗಿರುವ ಜನಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ತಮ್ಮ ಮತಪತ್ರವನ್ನು ಬದಲಾಯಿಸಿಕೊಂಡು ಬೇರೆ ಜಿಲ್ಲೆಗಳಲ್ಲಿ ಚುನಾವಣೆ ಎದುರಿಸಬೇಕಾದೀತು.
ಹನೀಫ್ ಕೊಡಾಜೆ, ಸಂಚಾಲಕರು, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ ಹಾಗೂ ದ.ಕ ಜಿಲ್ಲೆಯನ್ನು ಒಟ್ಟಾಗಿಸಿ ಪ್ರತ್ಯೇಕ ರಾಜ್ಯಕಟ್ಟುವ ಕಾರ್ಯ ಆಗಬೇಕು. - ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ. ಯೋಜನೆ ಬಗ್ಗೆ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಿ
ಎತ್ತಿನಹೊಳೆ ಯೋಜನೆಗೆ ಎಲ್ಲಾ ಪಕ್ಷವೂ ಕಾರಣವಾಗಿದೆ. ಕೋಲಾರ, ಚಿಕ್ಕಬಳ್ಳಾಪುರದ ಜನರ ನೀರಿನ ಬವಣೆ ಬಗ್ಗೆ ಸಹಾನುಭೂತಿ ಇದೆ. ಆದರೆ ಯೋಜನೆಯಿಂದ ಘಟ್ಟದ ಕೆಳಗೆ ಆಗುವ ಸಮಸ್ಯೆ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿ ಅದನ್ನು ಜನರಿಗೆ ತಿಳಿಸುವ ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಆಗಬೇಕು.ಜೆ.ಆರ್. ಲೋಬೊ, ವಿಧಾನ ಸಭಾ ಸದಸ್ಯರು.
ಹೋರಾಟದ ಮೂಲಕ ಜಿಲ್ಲೆಯ ಜನರ ಭಾವನೆ ವ್ಯಕ್ತವಾಗಿದೆ. ನಾಲ್ಕು ದಿನಗಳೊಳಗೆ ಮುಖ್ಯಮಂತ್ರಿ ಸಭೆ ಕರೆದು ಸಂವಾದ ಏರ್ಪಡಿಸಬೇಕು. ಈ ಹೋರಾಟ ನೇತ್ರಾವತಿಯ ರಕ್ಷಣೆಗಾಗಿ. ಜಿಲ್ಲೆಯವರು ಶಾಂತಿಪ್ರಿಯರು ಆದರೆ ಅನಿವಾರ್ಯವಾದರೆ ಅಶಾಂತಿ ಪ್ರಿಯರೂ ಆಗಬಲ್ಲರು.
ನಳಿನ್ ಕುಮಾರ್ ಕಟೀಲ್, ಸಂಸದರು.