×
Ad

ಮಾಲೆಗಾಂವ ಪ್ರಕರಣವನ್ನು ನ್ಯಾಯಾಲಯಕ್ಕೆ ಬಿಟ್ಟುಬಿಡಿ:ಜೇಟ್ಲಿ

Update: 2016-05-16 20:20 IST

ಹೊಸದಿಲ್ಲಿ,ಮೇ 16: ಮೋದಿ ಸರಕಾರದಲ್ಲಿ ಬಲಪಂಥೀಯ ಗುಂಪುಗಳ ವಿರುದ್ಧದ ಭಯೋತ್ಪಾದನೆ ಪ್ರಕರಣಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ಈ ವಿಷಯವನ್ನು ನ್ಯಾಯಾಲಯಕ್ಕೆ ಬಿಟ್ಟುಬಿಡಬೇಕು ಮತ್ತು ಯಾವುದು ಸರಿ ಅಥವಾ ತಪ್ಪು ಎನ್ನುವುದರ ಬಗ್ಗೆ ನ್ಯಾಯಾಂಗವು ನಿರ್ಧರಿಸುತ್ತದೆ ಎಂದು ಸೋಮವಾರ ಇಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷವನ್ನೂ ತರಾಟೆಗೆತ್ತಿಕೊಂಡ ಅವರು, ಅದು ಯುಪಿಎ ಅಧಿಕಾರದಲ್ಲಿದ್ದಾಗ ಸುಳ್ಳು ಆರೋಪ ಪಟ್ಟಿಗಳನ್ನು ಸೃಷ್ಟಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿತ್ತೆಂದು ಆರೋಪಿಸಿದರು. ಇಂತಹ ಪ್ರತಿಯೊಂದೂ ಪ್ರಕರಣದಲ್ಲಿ ನ್ಯಾಯಾಲಯಗಳು ಯಾವುದೇ ವಿಚಾರಣೆಯನ್ನೂ ನಡೆಸದೆೆ ಆರೋಪಿಗಳನ್ನು ಖುಲಾಸೆಗೊಳಿಸಿದ್ದವು ಎಂದು ಹೇಳಿದರು.
ಇಲ್ಲಿ ಮಹಿಳಾ ಪತ್ರಕರ್ತರ ಸಂಘಟನೆಯೊಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೇಟ್ಲಿ, ಬಿಜೆಪಿ ಆಡಳಿತದ ರಾಜ್ಯಗಳು ಪ್ರತಿಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ಮಹಾನ್ ನಾಯಕರನ್ನು ಕಡೆಗಣಿಸಲು ಪಠ್ಯಪುಸ್ತಕಗಳನ್ನು ಪರಿಷ್ಕರಿಸುತ್ತಿವೆ ಎಂಬ ಆರೋಪವನ್ನು ತಳ್ಳಿಹಾಕಿದರಲ್ಲದೆ, ಬಿಜೆಪಿಯು ಅಧಿಕಾರದಲ್ಲಿದ್ದಾಗಲೆಲ್ಲ ಈ ಆರೋಪ ಸಾಮಾನ್ಯವಾಗಿಬಿಟ್ಟಿದೆ ಎಂದರು.
ಮಾಲೆಗಾಂವ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಇತರರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವ ಕುರಿತು ಕಾಂಗ್ರೆಸ್ ಆರೋಪಗಳ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು,ಇವೆಲ್ಲ ಲಭ್ಯ ಸಾಕ್ಷಾಧಾರಗಳ ವಿಶ್ವಾಸಾರ್ಹತೆಯನ್ನು ಆಧರಿಸಿರುವ ಕಾನೂನು ವಿಷಯಗಳಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News