×
Ad

ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುಶ್ರುತ್‌ಗೆ ಐಎಎಸ್/ವೈದ್ಯಕೀಯ ನಿದೇಶಕನಾಗುವಾಸೆ

Update: 2016-05-16 21:39 IST

ಉಜಿರೆ, ಮೇ 16: ಭಾರತೀಯ ಲೋಕ ಸೇವಾ ಆಯೋಗದಲ್ಲಿ (ಐಎಎಸ್) ಅಥವಾ ವೈದ್ಯಕೀಯ ನಿರ್ದೇಶಕನಾಗಿ (ಮೆಡಿಕಲ್ ಡೈರೆಕ್ಟರ್) ಆಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ನನ್ನದು. ಆ ದಿಕ್ಕಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುವೆ. ಇದು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೆ ಸ್ಥಾನ ಪಡೆದಿರುವ ಬೆಳ್ತಂಗಡಿ ತಾಲೂಕಿನ ಸುಶ್ರುತ್‌ಯು.ಕೆ.ಯ ಗುರಿ.

ಪತ್ರಿಕೆ ಸೋಮವಾರ ಬೆಳ್ತಂಗಡಿ ಪೇಟೆ ಸನಿಹದ ಲಾಯಿಲ ಗ್ರಾಮದ ಕಕ್ಕೇನ ಎಂಬಲ್ಲಿರುವ ಪ್ರಣೀತ್ ಹೆಸರಿನ ಮನೆಗೆ ಭೇಟಿ ನೀಡಿ ಸುಶ್ರುತನಲ್ಲಿ ಮಾತುಕತೆಗಿಳಿಯಿತು.

ಲಾಯಿಲ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಸುಶ್ರುತ್ ಈ ಬಾರಿ ಒಟ್ಟು ಅಂಕ 625 ರಲ್ಲಿ 624 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.

ಕನ್ನಡ, ಇಂಗ್ಲೀಷ್, ಹಿಂದಿ, ಸಮಾಜ ಹಾಗು ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದರೆ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾನೆ. 620 ಅಂಕ ಬರಬಹುದೆಂದು ಆತನ ನಿರೀಕ್ಷೆಯಾಗಿತ್ತು.

ಪ್ರತಿದಿನ ಏಳೆಂಟು ಗಂಟೆ ಅಧ್ಯಯನ ಮಾಡುತ್ತಿದ್ದ ಯಾವುದೇ ಕೋಚಿಂಗ್ ಸೆಂಟರ್‌ನ ತರಬೇತಿ ಪಡೆಯದೆ ಸುಶ್ರುತ್ ಪಠ್ಯಪುಸ್ತಕವನ್ನಷ್ಟೇ ಓದುತ್ತಿದ್ದ. ಬೆಳಗ್ಗೆ 5 ಗಂಟೆಗೆ ಎದ್ದರೆ ರಾತ್ರಿ 11 ಗಂಟೆಗೆ ವಿಶ್ರಾಂತಿ. ಕೇವಲ ಶಾಲೆಯ ಓದಿನಲ್ಲಿ ಮುಂದಿರುವುದಷ್ಟೇ ಅಲ್ಲ. ಯಕ್ಷಗಾನ, ಭಾಗವತಿಕೆ, ಕೊಳಲು, ವಯಲಿನ್, ಭರತ ನೃತ್ಯದಲ್ಲೂ ಮುಂದು. ಈ ಪಠ್ಯೇತರ ಚಟುವಟಿಕೆ ಆತನ ಅಂಕಗಳಿಕೆಗೆ ಪೂರಕವಾಗಿತ್ತೆನ್ನುವುದು ವಿಶೇಷ.

ತಂದೆ ಕಿಶೋರ್ ಕುಮಾರ್ ಯು.ಬಿ. ಬಂಟ್ವಾಳದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸುಪರಿಟೆಂಡೆಂಟ್, ಯಕ್ಷಗಾನ ಪ್ರೇಮಿ ತಾಯಿ ಸುರೇಖಾ ಗುರುವಾಯನಕರೆ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿ. 5 ನೆ ತರಗತಿಯವರೆಗೆ ಮಡಿಕೇರಿಯಲ್ಲಿ ಶಿಕ್ಷಣ ಬಳಿಕ ಲಾಯಿಲದ ಸೈಂಟ್ ಮೇರಿ ಶಾಲೆಯಲ್ಲಿ. ಅಪ್ಪ ಅಮ್ಮನ ಹಾಗೂ ಶಾಲಾ ಅಧ್ಯಾಪಕ ವೃಂದದವರ ಬೆಂಬಲವೇ ನನ್ನ ಸಾಧನೆಗೆ ಕಾರಣ ಎಂದೆನ್ನುವ ಸುಶ್ರುತ್ ಐಎಎಸ್ ಅಥವಾ ಮೆಡಿಕಲ್ ಡೈರಕ್ಟರ್ ಆಗುವ ಹೆಬ್ಬಯಕೆಯನ್ನು ವ್ಯಕ್ತಪಡಿಸುತ್ತಾನೆ.

ನನ್ನ ಮಗ ಸಮಾಜ ಸೇವೆ ಮಾಡಬೇಕು. ಹೀಗಾಗಿ ಆತ ಐಎಎಸ್ ಪಾಸ್ ಆಗಲಿ ಎನ್ನುವ ಆಸೆ ನನ್ನದು. ನಾನು ನನ್ನ ಶಾಲೆಯಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ವಹಿಸಿದ ಶ್ರಮ ನನಗೆ ನನ್ನ ಮಗನ ಸಾಧನೆಯ ಮೂಲಕ ಪ್ರತಿಫಲ ನೀಡಿದೆ.

ಸುರೇಖಾ, ತಾಯಿ

ನನ್ನ ಸಂಗೀತ ಸಾಧನೆ ನನ್ನ ಓದಿಗೆ ಸಹಾಯ ಮಾಡಿದೆ. ಓದುವ ಧಾವಂತದಲ್ಲಿ ಒತ್ತಡ ಬಂದರೆ ಕೊಳಲು ನುಡಿಸುತ್ತಾ ಕೂರುತ್ತೇನೆ. ಅದು ನನ್ನ ಮನಸ್ಸನ್ನು ಹಗುರವಾಗಿಸುತ್ತದಲ್ಲದೆ ನನಗೆ ಓದಲು ಇನ್ನಷ್ಟು ಸ್ಪೂರ್ತಿಯನ್ನು ನೀಡುತ್ತದೆ.- ಸುಶ್ರುತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News