×
Ad

ನಿರ್ಮಿತಿ ಕೇಂದ್ರದಲ್ಲಿ ಪರಿಸರ ಸ್ನೇಹಿ ವಸತಿ ಮಾದರಿ ಪ್ರಾತ್ಯಕ್ಷಿಕೆಗೆ ಚಾಲನೆ

Update: 2016-05-16 23:18 IST

ಮಂಗಳೂರು, ಮೇ 18: ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರವಾದ ಸುರತ್ಕಲ್‌ನಲ್ಲಿ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಅಂತಿಮ ಎಂಟೆಕ್ ವಿದ್ಯಾರ್ಥಿ ತಾರೀಕ್ ಅಝೀಜ್ ನಿರ್ಮಿಸಿದ ಮಾದರಿ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಸೋಮವಾರ ಉದ್ಘಾಟಿಸಿದರು.

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವಲ್ಲಿ ಸರಕಾರದಿಂದ ಸೂಕ್ತ ಸಹಾಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಮೊಯ್ದೀನ್ ಬಾವ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಭಾವಿ, ಸಮನ್ವಯ ಅಧಿಕಾರಿ ಡಾ.ಬಾಬು ನಾರಾಯಣ್, ಎನ್‌ಐಟಿಕೆ ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಡಾ ಸುಭಾಶ್, ಯಾರಗಲ್, ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ.ಶ್ರೀಪ್ರಕಾಶ್ ಬಿ.,ಉಪ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ, ಯೋಜನಾ ಮಾರ್ಗದರ್ಶಕ ಸುಬ್ರಹ್ಮಣ್ಯ ಭಟ್ ಪಾಂಗಾಳ, ಸಿವಿಲ್ ಇಂಜಿನಿಯರಿಂಗ್ ಉಪನ್ಯಾಸಕ ಶ್ರೀನಾಥ ರಾವ್‌ಮತ್ತು ಅನಿಷಾ ತೋಡ್ತಿಲ್ಲಾಯ, ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ಶರತ್ ಮೊದಲಾದವರು ಉಪಸ್ಥಿತರಿದ್ದರು.

 ಹೂವಿನ ಮೊಗ್ಗಿನಾಕಾರದ ಕಟ್ಟಡದ ಮಾದರಿ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ವಿಶ್ರಾಂತ ಉಪನ್ಯಾಸಕ ಡಾ.ಕೆ.ಎಸ್ ಜಗದೀಶ್‌ರ ಸಲಹೆ ಹಾಗೂ ಯೋಜನಾ ಮಾರ್ಗದರ್ಶಕ ಸುಬ್ರಹ್ಮಣ್ಯ ಭಟ್‌ರ ಮಾರ್ಗದರ್ಶನದಲ್ಲಿ ಎಂ.ಟೆಕ್ ವಿದ್ಯಾರ್ಥಿ ತಾರೀಕ್ ಅಝೀಜ್ ವಿನ್ಯಾಸಗೊಳಿಸಿದ ಪರಿಸರ ಸ್ನೇಹಿ,ಲೋಹರಹಿತ ನೈಸರ್ಗಿಕ ಪ್ರತಿಕೂಲ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬಲ್ಲ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟ ಹೂವಿನ ಮೊಗ್ಗಿನ ಆಕಾರದ 30 ಅಡಿ ಸುತ್ತಳತೆಯ,9 ಅಡಿ ಎತ್ತರದ,4 ಇಂಚು ದಪ್ಪದ ಈ ಆಕೃತಿ 2,000 ಕಿಲೋಗ್ರಾಂ ಭಾರವನ್ನು ಸಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಿಟಕಿ, ಬಾಗಿಲನ್ನು ಹೊಂದಿರುವ ಈ ನಿರ್ಮಾಣ ಆಕೃತಿ ರೆಸಾರ್ಟ್, ಪ್ರವಾಸೋದ್ಯಮ ಯೋಜನೆಗಳಲ್ಲಿ, ಮಸೀದಿ, ದೇವಸ್ಥಾನ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ, ವಸತಿ ಯೋಜನೆಗಳಲ್ಲಿ ಬಳಸಲು ಯೋಗ್ಯವಾಗಿದೆ ಎಂದು ಯೋಜನೆಯ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಯೋಜನಾ ಮಾರ್ಗದರ್ಶಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News