ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಸಿಓಓ ಆತ್ಮಹತ್ಯೆ
ಗುರುಗಾಂವ್, ಮೇ 16: ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದ ಮುಖ್ಯ ಕಾರ್ಯಾಚರಣೆ ಅಧಿಕಾರಿ ರವಿವಾರ ಡಿಎಲ್‌ಎಫ್ ಸೊಸೈಟಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
47 ವರ್ಷ ವಯಸ್ಸಿನ ವಿನೀತ್ ವ್ಹಿಗ್, ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದ ದಕ್ಷಿಣ ಏಷ್ಯಾ ವಿಭಾಗದ ಸಿಓಓ ಆಗಿ ಕಾರ್ಯ ನಿರ್ವಸುತ್ತಿದ್ದರು. ಸೈಬರ್ ಸಿಟಿ ಏರಿಯಾದಲ್ಲಿರುವ ಅಪಾರ್ಟ್‌ಮೆಂಟಿನ 19ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿರುವ ಆತ್ಮಹತ್ಯೆ ಪತ್ರ ಅವರ ಜೇಬಿನಲ್ಲಿ ಪತ್ತೆಯಾಗಿದೆ.
ವಿನೀತ್ ತಮ್ಮ ತಂದೆ, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಜೊತೆ ಡಿಎಲ್‌ಎಫ್ ಬೆಳವೆದೆರೆ ಪಾರ್ಕ್‌ನಲ್ಲಿ ವಾಸವಿದ್ದರು. 19 ವರ್ಷದ ಹಿರಿಯ ಮಗ ಕಾಲೇಜು ವಿದ್ಯಾರ್ಥಿ. ತನ್ನ ಮಗನ ಆತ್ಮಹತ್ಯೆ ಆಘಾತದಿಂದ ವಿನೀತ್ ವ್ಹಿಗ್‌ರ ತಂದೆಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಮ ಛಾಯಾಗ್ರಾಹಕರಾಗಿದ್ದ ವಿನೀತ್, ಸಂಗೀತ ಹಾಗೂ ವನ್ಯಜೀವಿ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಜಪಾನ್, ನೆದರ್ಲೆಂಡ್ಸ್, ದಕ್ಷಿಣ ಕೊರಿಯಾ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡಿದ್ದ ಅವರ ಛಾಯಾಚಿತ್ರಗಳು ನ್ಯಾಷನಲ್ ಜಿಯೊಗ್ರಫಿಕ್ ಟ್ರಾವೆಲರ್ ಸೇರಿದಂತೆ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದವು.