×
Ad

ಬಂದ್ ಹಿಂದೆಗೆದುಕೊಳ್ಳುವುದಿಲ್ಲ: ಹೋರಾಟಗಾರರ ಸ್ಪಷ್ಟನೆ

Update: 2016-05-17 20:10 IST

ಮಂಗಳೂರು, ಮೇ 17: ಮೇ19 ರಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯಲಿರುವ ದ.ಕ ಜಿಲ್ಲಾ ಬಂದ್ ಕರೆಯನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳು ಮಾಡಿದ ಪ್ರಸ್ತಾಪಕ್ಕೆ ಹೋರಾಟಗಾರರು ಬಂದ್ ಹಿಂದೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೇ 19 ರಂದು ನಡೆಯಲಿರುವ ದ.ಕ.ಜಿಲ್ಲಾ ಸ್ವಯಂಪ್ರೇರಿತ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ನಡೆದ ನೇತ್ರಾವತಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಸರಕಾರಕ್ಕೆ ಈಗಾಗಲೇ ಹೋರಾಟದ ಬಿಸಿ ಮುಟ್ಚಿದೆ. ಬಂದ್ ಬಗ್ಗೆ 15 ದಿನಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದುವರೆಗೆ ಮಾತುಕತೆ ನಡೆಸಿಲ್ಲ. ಎಲ್ಲಾ ಧಾರ್ಮಿಕ ಮುಖಂಡರು ಬಂದ್ ಬಗ್ಗೆ ನಿರ್ಧರಿಸಿದ್ದಾರೆ. ಕೊನೆಯ ಹಂತದಲ್ಲಿ ಬಂದ್ ಹಿಂತೆಗೆದುಕೊಳ್ಳಲಾಗದು. ನಮಗೆ ಹಿಂತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ಎಂದು ಜಿಲ್ಲಾಧಿಕಾರಿಗಳ ಬಂದ್ ಹಿಂದೆಗೆದುಕೊಳ್ಳಬೇಕೆಂಬ ಪ್ರಸ್ತಾಪಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಬಂದ್‌ನಿಂದ ದೈನಂದಿನ ವ್ಯವಹಾರಗಳಿಗೆ ತೊಡಕಾಗುವುದಲ್ಲದೆ ಅಹಿತಕರ ಘಟನೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪ್ರಸ್ತಾಪಿತ ಬಂದ್ ಕೈಬಿಡಬೇಕು. ಸಮಿತಿಯ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಸಭೆ ನಡೆಸಿ ಮಾತುಕತೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಎತ್ತಿನಹೊಳೆ ಯೋಜನೆಯು ರಾಜ್ಯ ಸರಕಾರ ತೆಗೆದುಕೊಂಡ ತೀರ್ಮಾನದಂತೆ ಆಗಿದೆ. ಈ ಹಿಂದಿನ ನಾಲ್ಕು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಯೋಜನೆಯ ಪುನರ್‌ಪರಿಶೀಲನೆ ಮಾಡಲು ತಾನು ಪ್ರಯತ್ನಪಡುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಎತ್ತಿನಹೊಳೆ ಯೋಜನೆಯ ಬಗ್ಗೆ ಈ ಹಿಂದೆಯೇ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಬೇಡಿಕೆ ತಿಳಿಸಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಯೋಜನೆ ಕುರಿತು ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಸರಕಾರದ ನಿಲುವು ನೋಡಿದಾಗ ಎತ್ತಿನಹೊಳೆ ಯೋಜನೆಯನ್ನು ಮಾಡಿ ತೀರುವುದೆಂಬ ಭಾವನೆ ನಮಗೆ ಬಂದಿದೆ. ಇದು ಜನಪ್ರತಿನಿಧಿಗಳು, ಕೆಲವು ಹಿರಿಯ ಅಧಿಕಾರಿಗಳು ಸೇರಿ ನೂರಕ್ಕೆ ನೂರು ಪಾಲು ಹಣ ಮಾಡುವ ದಂಧೆ. ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸಿದರೂ ಹೋರಾಟಗಾರರನ್ನು ಕರೆಸಿ ಮಾತನಾಡಿಸುವ ಪ್ರಯತ್ನವೂ ಮಾಡಿಲ್ಲ. ಹೀಗಾಗಿ ನಾವು ಪ್ರಜಾಸತ್ತಾತ್ಮಕವಾಗಿ ನ್ಯಾಯಯುತ ಹೋರಾಟಕ್ಕೆ ಮುಂದಾಗಿದ್ದೇವೆ.

ಬಂದ್ ಶಾಂತಿಯುತವಾಗಿರಲಿದೆ. ಜನರ ಕಷ್ಟವನ್ನು ಅರಿತು ಜಿಲ್ಲಾಡಳಿತ ಯೋಚಿಸಬೇಕು. ಸಭೆ ನಡೆಸಲು ಮುಖ್ಯಮಂತ್ರಿಗಳೇ ದಿನ ನಿಗದಿ ಮಾಡಿಕೊಳ್ಳಬೇಕು. ತರಾತುರಿಯಲ್ಲಿ ದಿನ ನಿಗದಿ ಮಾಡಿದನ್ನು ಮಾತ್ರ ತಪ್ಪಿಸಿದ್ದೇವೆ ಹೊರತು ಇದುವರೆಗೆ ಮಾತುಕತೆ ನಡೆಸುವ ಪ್ರಯತ್ನವಾಗಿಲ್ಲ. ಜಿಲ್ಲೆಯನ್ನು ಬರಡು ಭೂಮಿಯಾಗಿಸುವುದನ್ನು ತಪ್ಪಿಸಲು ಸರಕಾರಕ್ಕೆ ಮನಸ್ಸು ಬೇಕಷ್ಟೇ, ನೇತ್ರಾವತಿಯ ನೀರು ದೇವರು ಕೊಟ್ಟಿದ್ದು, ಮುಖ್ಯಮಂತ್ರಿಗಳು ಕೊಟ್ಟಿಲ್ಲ ಎಂದು ಹೇಳಿದರು.

ಹೋರಾಟಗಾರ ಎಂ.ಜಿ.ಹೆಗಡೆ , ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನ್ೀ ಕೊಡಾಜೆ, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ರಹೀಂ ಉಚ್ಚಿಲ್ ಮೊದಲಾದವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಪ ಪೊಲೀಸ್ ಅಧೀಕ್ಷಕರು, ಹಾಗೂ ನಗರ ಪೊಲೀಸ್ ಉಪ ಆಯುಕ್ತರುಗಳು ಹಾಗೂ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News