×
Ad

ಬಾಳಿಗಾ ಹತ್ಯೆ ಪ್ರಕರಣ: ಆರೋಪಿ ಶೈಲೇಶ್ ಬಂಧನ

Update: 2016-05-17 20:48 IST

ಮಂಗಳೂರು, ಮೇ 17: ಆರ್‌ಟಿಐ ಕಾರ್ಯಕರ್ತ ವಿನಾಯಕ್ ಪಾಂಡುರಂಗ ಬಾಳಿಗಾ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಓರ್ವನಾದ ಶೈಲೇಶ್ ಯಾನೆ ಶೈಲು (40) ಎಂಬಾತನನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ಮಾ.23 ರಂದು ನಗರದ ಬೆಸೆಂಟ್ ಕಾಲೇಜಿನ ಬಳಿಯಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಎಂಬವರನ್ನು ಕೊಲೆಗೈದು ಈತ ತಲೆಮರೆಸಿಕೊಂಡಿದ್ದ.ಇಂದು ಖಚಿತ ಮಾಹಿತಿಯ ಆಧಾರದಲ್ಲಿ ಸಿಸಿಬಿ ಪೊಲೀಸರು ಮಂಗಳೂರು ಹೊರವಲಯದಿಂದ ಶೈಲೇಶ್‌ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಶೈಲೇಶ್ ಕಳೆದ 8 ವರ್ಷಗಳಿಂದೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್‌ರ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಸುಮಾರು 6 ತಿಂಗಳ ಹಿಂದಷ್ಟೇ ಕೆಲಸ ತೊರೆದಿದ್ದ ಎಂದು ತಿಳಿದುಬಂದಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ ಮತ್ತು ಶಿವ ಶಿವಪ್ರಸಾದ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ನಮೋಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ತಲೆಮರೆಸಿಕೊಂಡಿದ್ದಾನೆ.

ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಮಾಹಿತಿ ದೊರೆತಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News