ಶಿಕ್ಷಣ ಎಂದರೆ ದಂಧೆ ಅಲ್ಲ: ಮೋಹನ್ ಆಳ್ವ

Update: 2016-05-17 15:31 GMT

ಕಾರ್ಕಳ, ಮೇ 17: ಶಿಕ್ಷಣವೆಂದರೆ ದಂಧೆಯಲ್ಲ. ಈ ದೇಶದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಗುರುಕುಲ ಪದ್ಧತಿ ಜಾಗೃತಗೊಳಿಸಿತ್ತು. ಭಾರತದ ಅಂತಃಸತ್ತ್ವವು ನಿಹಿತವಾಗಿರುವುದು ಶಿಕ್ಷಣದಲ್ಲಿ ಎಂದು ಅರಿತ ನಮ್ಮ ಪೂರ್ವಜರು ಶಿಕ್ಷಣವನ್ನು ದಂಧೆಯನ್ನಾಗಿಸದೆ, ವ್ಯಾಪಾರವನ್ನಾಗಿಸದೆ ಸೇವೆಯೆಂಬ ಭಾವದಿಂದ ಪರಿಗಣಿಸಿದ್ದರು. ಈ ಸೇವಾಭಾವನೆಯ ಶಿಕ್ಷಣವೇ ಭಾರತದ ಜಗದ್ಗುರುವಿನ ಸ್ಥಾನಕ್ಕೆ ಕಾರಣವಾಗಿತ್ತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದ್ದಾರೆ.

ಅವರು ಶ್ರೀ ಹರಿಹರ ಸಭಾವನ ಕಾರ್ಕಳ ಇಲ್ಲಿ ಗೋಖಲೆ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರೇರಣಾವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರತಿವರ್ಷವೂ ಲಕ್ಷಾಂತರ ತಂತ್ರಜ್ಞರನ್ನು, ವೈದ್ಯರನ್ನು ಸೃಷ್ಟಿಸುತ್ತಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯು ಸ್ವಾವಲಂಬನೆಯ ಭಾವವನ್ನು ವಿದ್ಯಾರ್ಥಿಗಳಲ್ಲಿ ತುಂಬದಿರುವುದು ದುರಂತ. ಅಂಕಗಳ ಆಧಾರದಲ್ಲಿ ಬದುಕನ್ನು ಕಟ್ಟಿಕೊಳ್ಳುವುದಕ್ಕಿಂತ ಕೌಶಲದ ಆಧಾರದಲ್ಲಿ ಜೀವನ ನಿರ್ವಹಣೆಗೈಯ್ಯಬೇಕು. ವ್ಯಕ್ತಿವಿಕಾಸದಿಂದ ರಾಷ್ಟ್ರವಿಕಾಸವೆಂಬ ಪರಿಕಲ್ಪನೆಯ ಭಾರತೀಯ ಶಿಕ್ಷಣ ವ್ಯವಸ್ಥೆಯೇ ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರು.

ಇಂದಿನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ದುರಂತವನ್ನು ಮಾರ್ಮಿಕವಾಗಿ ಬಿಚ್ಚಿಟ್ಟ ಡಾ.ಆಳ್ವರು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿರುವ ಕೆಲವು ವ್ಯಕ್ತಿಗಳ ಕಾರಣದಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಯನ್ನನುಭವಿಸಬೇಕಾಗಿದೆ. ಇಂತಹ ಪ್ರವೃತ್ತಿಗೆ ಕಡಿವಾಣವನ್ನು ಹಾಕದ ಹೊರತು ವಿದ್ಯಾರ್ಥಿಗಳಿಗೆ ನ್ಯಾಯವನ್ನು ದೊರಕಿಸುವುದು ಅಸಾಧ್ಯ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಹಿತವನ್ನು ಕಾಯುವುದು ಸರಕಾರದ ಆದ್ಯ ಕರ್ತವ್ಯ ಎಂದರು.

ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಶಿಕ್ಷಣವೆಂದರೆ ವಿದ್ಯಾರ್ಥಿಗಳೊಳಗೆ ಅಡಗಿರುವ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ದೇಶದ ಹಾಗೂ ಸಮಾಜದ ಜೊತೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಮನೋಭಾವನೆಯನ್ನು ಶಿಕ್ಷಣ ಸಂಸ್ಥೆಗಳು ಬೆಳೆಸಬೇಕು ಎಂದರು.

ತಿರುಮಗನ್ ಪ್ರೇರಣಾ ಪುರಸ್ಕಾರವನ್ನು ಬಾಬು ಮೊಲಿ ಮತ್ತು ಸುಂದರಿ ಇವರಿಗೆ ಪ್ರದಾನಿಸಿದ ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಗೆ ಕಳುಹಿಸುವುದರಿಂದ ವಿದ್ಯಾರ್ಥಿಗಳ ಬದಲಾವಣೆ ಅಸಾಧ್ಯ. ಅಧ್ಯಾಪಕರ ಜೊತೆಜೊತೆಯಲ್ಲಿಯೇ ಪೋಷಕರು ತಮ್ಮ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತುಂಬಿಸುವ ನೈತಿಕ ಜವಾಬ್ದಾರಿಯನ್ನು ಹೊರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಾರತೀಯ ಪರಂಪರೆ ಇರುವುದೇ ಶಿಕ್ಷಣದಲ್ಲಿ. ಇಂದು ಜಗತ್ತೇ ಭಾರತವನ್ನು ನೋಡುತ್ತಿರುವ ಈ ಸಂದರ್ಭದಲ್ಲಿ, ಭಾರತ ಜಗತ್ತಿನ ನಾಯಕನಾಗುತ್ತಿರುವ ಈ ಹೊತ್ತಿನಲ್ಲಿ ಪ್ರೇರಣಾದಂತಹ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದ್ಧತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷ ವಸಂತ ಗೋಖಲೆ, ವಿಶ್ವಸ್ತ ರಮೇಶ ಗೋಖಲೆ, ಶ್ರೀ ರಂಗ ಗೋಖಲೆ, ಹರಿಹರೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಪಾಟಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News