×
Ad

ಗಾಳಿ-ಮಳೆ: ಉಡುಪಿ ಜಿಲ್ಲಾದ್ಯಂತ ನೂರಾರು ಮನೆಗಳಿಗೆ ಹಾನಿ

Update: 2016-05-17 23:39 IST

ಉಡುಪಿ, ಮೇ 17: ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ವೇಳೆ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ಮೂರು ತಾಲೂಕುಗಳಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಸೊತ್ತುಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ನೂರಾರು ವಿದ್ಯುತ್ ಕಂಬಗಳು ಧರಾಶಾಯಿಯಾದ ಪರಿಣಾಮ ಜಿಲ್ಲೆಯ ಅನೇಕ ಕಡೆಗಳಲ್ಲಿ ಜನತೆ ವಿದ್ಯುತ್ ಇಲ್ಲದೆ ರಾತ್ರಿಗಳನ್ನು ಕಳೆಯಬೇಕಾಯಿತು. ಮರಗಳು ಮನೆ, ಮಂದಿರ, ಶಾಲೆಗಳ ಮೇಲೆಲ್ಲಾ ಉರುಳಿ ಬಿದ್ದು ಲಕ್ಷಾಂತರ ರೂ.ನಷ್ಟವಾಗಿದೆ. ಅನೇಕ ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿದ್ದರೆ, ಬಿರುಗಾಳಿಯಿಂದ ತೋಟಗಳಲ್ಲಿದ್ದ ಅಡಿಕೆ, ಬಾಳೆ ಗಿಡಗಳು ನೆಲಕ್ಕುರುಳಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿವೆ. ಕುಂದಾಪುರ: ತಾಲೂಕಿನಲ್ಲಿ ಬಿರುಗಾಳಿ ಅತೀ ಹೆಚ್ಚಿನ ಹಾನಿಯನ್ನೆಸಗಿದೆ. ಹೊಸಂಗಡಿ, ಸಿದ್ದಾಪುರ ಆಸುಪಾಸಿನಲ್ಲಿ ನಿನ್ನೆ ಸಂಜೆ ವೇಳೆ ಸುರಿದ ಗಾಳಿ-ಮಳೆಯಿಂದ ಸುಮಾರು 60 ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಸುಮಾರು ಮೂರು ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಕುಂದಾಪುರ ತಾಲೂಕು ಕಚೇರಿಯ ವರದಿಗಳು ತಿಳಿಸಿವೆ.

ಕುಂದಾಪುರ ಕಸಬಾ, ಹಾರ್ದಳ್ಳಿ-ಮಂಡಳ್ಳಿ, ಹಳ್ಳಾಡಿ, ಹರ್ಕಾಡಿ, ಹೊಸಾಡುಗಳಲ್ಲಿ ಅನೇಕ ಮನೆಗಳ ಮೇಲೆ ಮರಗಳು ಬಿದ್ದು ಸುಮಾರು 50,000 ರೂ. ನಷ್ಟ ಸಂಭವಿಸಿದೆ. ಕುಂಭಾಶಿ, ಬಸ್ರೂರು, ಬೋಳೂರು, ಕಮಲಶಿಲೆ, ಹಳ್ಳಿಹೊಳೆಗಳಲ್ಲೂ 10ಕ್ಕೂ ಅಕ ಮನೆಗಳಿಗಾದ ಹಾನಿಯ ಪ್ರಮಾಣ 1.5 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಕರ್ಕುಂಜೆಯಲ್ಲಿ ಬೀಸಿದ ಬಿರುಗಾಳಿಗೆ ಅಡಿಕೆ-ಬಾಳೆಗಿಡಗಳ ತೋಟ ಸಂಪೂರ್ಣ ನಾಶವಾಗಿದೆ. ಗೋಪಾಡಿಯಲ್ಲಿ 4, ತೆಕ್ಕಟ್ಟೆಯಲ್ಲಿ ಎರಡು ಮನೆಗಳು, ಉಳ್ತೂರಿನಲ್ಲಿ 2, ಬಳ್ಕೂರು, ಕಂದಾವರ, ಹೆಸ್ಕತ್ತೂರು, ಹೊಂಬಾಡಿ-ಮಂಡಾಡಿಗಳಲ್ಲಿ 10ಕ್ಕೂ ಅಕ ಮನೆ ಗಳಿಗೆ ಹಾನಿಯಾಗಿದ್ದು, 2 ಲಕ್ಷ ರೂ.ಗಳಿಗೂ ಅಕ ಹಾನಿಯಾದ ಬಗ್ಗೆ ವರದಿಗಳು ಬಂದಿವೆ.

ಕಾರ್ಕಳ: ಮುದ್ರಾಡಿ ಗ್ರಾಮದ ರುದ್ರಯ್ಯ ಆಹಾರಿ ಹಾಗೂ ಪಾಂಡು ಶೆಟ್ಟಿಗಾರ್ ಎಂಬವರ ಮನೆಗಳಿಗೆ ಸಿಡಿಲು ಬಡಿದು, ವಿದ್ಯುತ್ ವಯರಿಂಗ್ ಹಾಗೂ ಉಪಕರಣಗಳು ಸಂಪೂರ್ಣ ಹಾನಿಗೊಂಡಿವೆ. ಸುಮಾರು 70,000 ರೂ.ಗಳಿಗೂ ಅಕ ನಷ್ಟವಾಗಿದೆ. ಕುಕ್ಕಂದೂರು ಪರಿಸರದಲ್ಲಿ 18 ಮನೆಗಳಿಗೆ, ಬೈಲೂರು ಪರಿಸರದಲ್ಲಿ 10 ಮನೆಗಳು ಹಾಗೂ ಕಣಜಾರು, ನೀರೆ ಪರಿಸರದ ಮೂರು ಮನೆಗಳ ಮೇಲೆ ಮರಗಳು ಬಿದ್ದು ಭಾಗಶ: ಹಾನಿಯಾಗಿದ್ದು 5 ಲಕ್ಷ ರೂ.ಗಳಿಗೂ ಅಕ ನಷ್ಟವಾಗಿದೆ.

ಉಡುಪಿ: ಉಡುಪಿ ತಾಲೂಕಿನಲ್ಲೂ ನಿನ್ನೆ ರಾತ್ರಿ ಸುರಿದ ಮಳೆ, ಬೀಸಿದ ಭಾರೀ ಗಾಳಿಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ತೆಂಕಗ್ರಾಮದ ಅಮ್ಮಣ್ಣಿ ಕೋಟ್ಯಾನ್ ಎಂಬವರ ಮನೆ ಮೇಲೆ ಮರ ಬಿದ್ದು 50,000 ರೂ., ಬನ್ನಂಜೆಯ ಗಣೇಶ್ ಪೈ ಎಂಬವರ ಅಂಗಡಿ ಮೇಲೆ ಮರ ಬಿದ್ದು 40,000 ರೂ. ನಷ್ಟವಾಗಿದೆ. ಬಾರಕೂರು ಹೇರಾಡಿ ಗ್ರಾಮದ ಕೊರಗಜ್ಜ ದೈವಸ್ಥಾನದ ಮೇಲ್ಛಾವಣಿ ಗಾಳಿಗೆ ಹಾರಿಹೋಗಿದ್ದು, 2 ಲಕ್ಷ ರೂ. ನಷ್ಟ ಅಂದಾಜು ಮಾಡಲಾಗಿದೆ. ಚೇರ್ಕಾಡಿಯ ವಸಂತಿ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು ಎರಡು ಲಕ್ಷ ರೂ. ನಷ್ಟವಾಗಿದೆ. ಅದೇ ಗ್ರಾಮದ ಜಯಂತಿ ಭಟ್ ಮನೆಗೆ ಹಾನಿಯಾಗಿ 1.50 ಲಕ್ಷ ರೂ. ನಷ್ಟವಾಗಿದೆ. ಅಂಜಾರು ಓಂತಿಬೆಟ್ಟಿನಲ್ಲಿ ಪಾರ್ವತಿ ನಾಯಕ್ ಹಾಗೂ ನಡೂರು ರಘುರಾಮ ಶೆಟ್ಟಿ ಎಂಬವರ ಮನೆಗೆ ಹಾನಿಯಾಗಿ ತಲಾ ಒಂದು ಲಕ್ಷ ರೂ. ನಷ್ಟ ಸಂಭವಿಸಿದೆ.

ಉಪ್ಪೂರಿನ ಪ್ರಪುಲ್ಲಚಂದ್ರ ಎಂಬವರ ಮನೆಗೆ ಹಾನಿಯಾಗಿ 50 ಸಾವಿರ ರೂ., ಮಣಿಪುರದ ಸಂಜೀವ ಪೂಜಾರಿ, ಕೋಡಿಯ ರಾಮ ಖಾರ್ವಿ ಮನೆಗೆ ಹಾನಿಯಾಗಿ ತಲಾ 10,000 ರೂ., ಕಕ್ಕುಂಜೆ ಜಲಜ ನಾಯ್ಕ ಎಂಬವರ ಮನೆಗೆ ಹಾನಿಯಾಗಿ 20 ಸಾವಿರ ರೂ., ದುರ್ಗಾಪರಮೇಶ್ವರಿ ದೇವಸ್ಥಾನದ ಶೆಡ್‌ಗೆ ಹಾನಿಯಾಗಿ 15 ಸಾವಿರ ರೂ., ಕೊರಂಗ್ರಪಾಡಿ ಕುಸುಮಾ ಎಂಬವರ ಮನೆಗೆ ಹಾನಿಯಾಗಿ 20,000 ರೂ. ನಷ್ಟ ಸಂಭವಿಸಿದೆ.

ಮರಬಿದ್ದು ವ್ಯಕ್ತಿಗೆ ಗಾಯ

ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ತೆಂಗಿನಮರ ಬಿದ್ದು, ಗಂಭೀರವಾಗಿ ಗಾಯಗೊಂಡ ಘಟನೆ ಬ್ರಹ್ಮಾವರ ಸಮೀಪದ ಹಾರಾಡಿ ಗ್ರಾಮದ ಸಾಲಿಕೇರಿ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಸಾಲಿಕೇರಿಯ ಜೆರಾಲ್ಡ್ ಲುವಿನ್ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News