×
Ad

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಸರ್ಚಾರ್ಜ್

Update: 2016-05-17 23:40 IST

ಹೊಸದಿಲ್ಲಿ, ಮೇ 17: ದೇಶಾದ್ಯಂತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಕಾನೂನುಬಾಹಿರವಾಗಿ ಸರ್ಚಾರ್ಜ್ ವಿಧಿಸಲಾಗುತ್ತಿದೆ ಎಂದು ಆಪಾದಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ದಿಲ್ಲಿ ಹೈಕೋರ್ಟ್ ಈ ಸಂಬಂಧ ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸ್ಪಷ್ಟನೆ ಕೇಳಿದೆ. ನಗದು ವಹಿವಾಟಿನ ಮೇಲೆ ಇಲ್ಲದ ಸರ್ಚಾರ್ಜನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ವಿಧಿಸುತ್ತಿರುವ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತ್‌ನಾಥ್ ಅವರನ್ನು ಒಳಗೊಂಡ ಪೀಠ, ಈ ಸಂಬಂಧ ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 19ರ ಒಳಗಾಗಿ ಈ ಸಂಬಂಧ ಅಫಿದಾವಿತ್ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂಥ ಕಾನೂನುಬಾಹಿರ ಹಾಗೂ ತಾರತಮ್ಯದ ಸರ್ಚಾರ್ಜ್ ಸ್ಥಗಿತಗೊಳಿಸುವ ಸಂಬಂಧ ಮಾರ್ಗಸೂಚಿ ಯನ್ನು ಸಿದ್ಧಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೆಟ್ರೋಲ್ ವೆಚ್ಚವನ್ನು ಪಾವತಿ ಮಾಡಿದಾಗ ಈ ಕಾನೂನುಬಾಹಿರ, ಅಸಮಾನ ಹಾಗೂ ಬೇಕಾಬಿಟ್ಟಿ ನೀತಿ ಬಹಿರಂಗವಾಗಿದೆ ಎಂದು ವಕೀಲ ಅಮಿತ್ ಸಹಾನಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಿದ್ದರು. ಸಚಿವಾಲಯ ಹಾಗೂ ಆರ್‌ಬಿಐ ದೇಶಾದ್ಯಂತ ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಹೊಣೆ ಹೊಂದಿದೆ ಹಾಗೂ ಬ್ಯಾಂಕ್‌ಗಳ ಕಾರ್ಯಚಟುವಟಿಕೆಯ ಮೇಲೆ ಮೇಲ್ವಿಚಾರಣೆ ವಹಿಸುವ ಹೊಣೆಯೂ ಇವುಗಳ ಮೇಲಿದೆ ಎಂದು ವಾದಿಸಿದ್ದರು. ಇದು ನಗದು ರೂಪದಲ್ಲಿ ಕಪ್ಪುಹಣ ಚಲಾವಣೆಗೆ ಕಾರಣವಾಗುತ್ತದೆ ಎಂದೂ ಅವರು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News