×
Ad

22ಕ್ಕೆ ಪ್ರಧಾನಿ ನರೇಂದ್ರ ಮೋದಿ ಇರಾನ್ ಭೇಟಿ

Update: 2016-05-17 23:54 IST

650 ಕೋಟಿ ಡಾಲರ್ ತೈಲಬಾಕಿ ಪಾವತಿಗೆ ಧಾವಿಸಿದ ಭಾರತ

ಹೊಸದಿಲ್ಲಿ, ಮೇ 17: ಪ್ರಧಾನಿ ನರೇಂದ್ರ ಮೋದಿಯವರ ಇರಾನ್ ಭೇಟಿಗೆ ಕೆಲವೇ ವಾರಗಳ ಮುನ್ನ ಭಾರತ ಇರಾನ್‌ಗೆ ಪಾವತಿ ಮಾಡಬೇಕಿರುವ ಕಚ್ಚಾ ತೈಲ ಆಮದಿನ ಬಾಕಿ ಮೊತ್ತವಾದ 650 ಕೋಟಿ ಡಾಲರ್ ಪಾವತಿ ಮಾಡುವ ಸಂಬಂಧ ಯೋಜನೆ ಸಿದ್ಧಪಡಿಸಲು ಮುಂದಾಗಿದೆ.

ಈ ಪಾವತಿ ನಿರ್ವಹಿಸಲು ಟರ್ಕಿಯ ಹಲ್ಕ್ ಬ್ಯಾಂಕ್‌ನ ಸೌಲಭ್ಯವನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಹಣವನ್ನು ಯೂರೊದಲ್ಲಿ ಪಾವತಿ ಮಾಡಲಾಗುವುದು ಎಂದು ಇರಾನ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಸೌರಭ್ ಕುಮಾರ್ ಪ್ರಕಟಿಸಿದ್ದಾರೆ.

ಇರಾನ್ ಕಚ್ಚಾತೈಲದ ಅತೀದೊಡ್ಡ ಆಮದು ರಾಷ್ಟ್ರವಾಗಿರುವ ಭಾರತ, ಆ ದೇಶದಿಂದ ಪ್ರತಿದಿನ 4 ಲಕ್ಷ ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ವರ್ಷದ ಎಪ್ರಿಲ್ 1ರಿಂದ ಆಮದು ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಆದರೆ ಅಣ್ವಸ್ತ್ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇರಾನ್ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಬಾಕಿಯನ್ನು ಭಾರತ ಉಳಿಸಿಕೊಂಡಿದೆ. ಈ ತಿಂಗಳ 22ರಂದು ಇರಾನ್‌ಗೆ ಪ್ರಯಾಣ ಬೆಳೆಸುವ ಮೋದಿ ಎರಡು ದಿನಗಳ ಕಾಲ ಅಲ್ಲಿ ತಂಗುವರು.

ಇರಾನ್‌ನ ವಿಸ್ತೃತವಾದ ಫರ್ಹಾದ್ ಬಿ ಅನಿಲ ಕ್ಷೇತ್ರದ ಅಭಿವೃದ್ಧಿ ಹಕ್ಕು ಪ್ರತಿಪಾದನೆಗೆ ಒತ್ತು ನೀಡುವಂತೆ ಮನವೊಲಿಸುವ ಸಲುವಾಗಿ ಭಾರತದ ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ತಿಂಗಳು ಇರಾನ್‌ಗೆ ಪ್ರವಾಸ ಕೈಗೊಂಡಿದ್ದರು. ಸರಕಾರಿ ಸ್ವಾಮ್ಯದ ಒಎನ್‌ಜಿಸಿ 2008ರಲ್ಲಿ ಈ ಸಮುದ್ರ ಕಿನಾರೆಯ ತೈಲಕ್ಷೇತ್ರವನ್ನು ಶೋಧಿಸಿತ್ತು. ಆದರೆ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಅಭಿವೃದ್ಧಿಪಡಿಸಲು ಅನುಮತಿ ಪಡೆಯಲು ಒಎನ್‌ಜಿಸಿ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News