ನಾಳೆ ದ.ಕ ಜಿಲ್ಲೆ ಸಂಪೂರ್ಣ ಬಂದ್ ?
ಮಂಗಳೂರು,ಮೇ 17:ನೇತ್ರಾವತಿ ನದಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಖಂಡಿಸಿ ಮೇ 19ರಂದು ದ.ಕ.ಜಿಲ್ಲಾ ಬಂ ದ್ ನಲ್ಲಿ ದ.ಕ ಜಿಲ್ಲೆ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ದ.ಕ ಜಿಲ್ಲೆ ಬಂದ್ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್ ಸಂಚಾರ ಸೇರಿದಂತೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಯವಾಗುವ ಸಾಧ್ಯತೆಯಿದೆ.
2014 ರ ಮಾ. 3 ರಂದು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಕರೆ ನೀಡಲಾಗಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿರುವುದರಿಂದ ಈ ಬಾರಿಯೂ ಕರೆ ನೀಡಲಾಗಿರುವ ಬಂದ್ ಸಂಪುರ್ಣ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಹೋರಾಟಗಾರರಲ್ಲಿ ಇದೆ.
ದ.ಕ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪಾರಮ್ಯವಿರುವುದರಿಂದ ಬಂದ್ ಯಶಸ್ವಿಯಾಗುವುದು ಖಾಸಗಿ ಬಸ್‌ಗಳ ಸಂಚಾರದ ಮೇಲೆ ಅವಲಂಬಿತವಾಗಿದೆ. ಜಿಲ್ಲೆಯಲ್ಲಿ ಬಸ್ ಚಾಲಕರುಗಳು ಬಂದ್ ಗೆ ಬೆಂಬಲ ಸೂಚಿಸಿದ್ದು ಖಾಸಗಿ ಬಸ್‌ಗಳು ಓಡಾಟ ಸಂಪೂರ್ಣ ನಿಲ್ಲುವ ಸಾಧ್ಯತೆಯೆ ಹೆಚ್ಚಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ ಅವರು ದ.ಕ ಜಿಲ್ಲಾ ಬಂದ್ ನಲ್ಲಿ ಸರ್ವಿಸ್ ಬಸ್ ಗಳ ಓಡಾಟ ಚಾಲಕರ ಲಭ್ಯತೆ ಮತ್ತು ಪರಿಸ್ಥಿತಿಯನ್ನು ಅಲವಂಬಿಸಿ ಇದೆ ಎಂದು ಹೇಳಿದ್ದಾರೆ.
ದ.ಕ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ನೆಲ್ಸನ್ ಪಿರೇರಾ ಅವರು ಪತ್ರಿಕೆಯೊಂದಿಗೆ ಮಾತನಾಡಿ ಬಂದ್‌ಗೆ ಬಸ್ ಮಾಲಕರ ಸಂಘದಿಂದ ಬೆಂಬಲ ನೀಡುವಂತೆ ಹೋರಾಟಗಾರರು ವಿನಂತಿಸಿದ್ದಾರೆ. ಆದರೆ ಸಿಟಿ ಬಸ್ ಮಾಲಕರ ಸಂಘದಿಂದ ಬಂದ್ ಗೆ ಬೆಂಬಲಿಸುವುದಿಲ್ಲ. ಆದರೆ ಬಸ್ ಚಾಲಕರು ಬಂದ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ . ಬಸ್ ಚಾಲಕರು ಕರ್ತವ್ಯಕ್ಕೆ ಬರದಿದ್ದರೆ ಬಸ್ ಚಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್‌ಗಳು ಆರಂಭದಲ್ಲಿ ಓಡಾಟ ನಡೆಸುತ್ತವೆಯಾದರೂ ಪರಿಸ್ಥಿತಿಯನ್ನು ಗಮನಿಸಿ ಸಂಚಾರವನ್ನು ನಿರ್ಧರಿಸಲಿದೆ.
ಬಸ್ ಸಂಚಾರ ವ್ಯತ್ಯಾಯ ಆಗಲಿರುವುದರಿಂದ ಸಾರ್ವಜನಿಕರಿಗೆ, ಉದ್ಯೋಗಕ್ಕೆ ತೆರಳುವವರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಕೆಲವೊಂದು ರಿಕ್ಷಾ ಸಂಘಟನೆಗಳನ್ನು ಹೊರತು ಪಡಿಸಿ ಹೆಚ್ಚಿನ ರಿಕ್ಷಾ ಸಂಘನೆಗಳು ಬೆಂಬಲ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ರಿಕ್ಷಾಗಳ ಓಡಾಟವು ಕ್ಷೀಣ ಸಂಖ್ಯೆಯಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.
ಅಗತ್ಯ ಸಾಮಾಗ್ರಿಗಳು ಸಿಗುವ ಔಷಧ ,ಹಾಲು , ಪತ್ರಿಕಾ ವ್ಯಾಪಾರ ಬಂದ್ ನಿಂದ ವಿನಾಯಿತಿ ಪಡೆದಿರುತ್ತದೆ.
----
ಸಲಹೆಗಳು :
►ಮೇ.19 ರಂದು ದ.ಕ ಜಿಲ್ಲಾ ಬಂದ್ ನಡೆಯತ್ತಿರುವುದರಿಂದ ಸಾರ್ವಜನಿಕರಿಗೆ ಪ್ರಯಾಣಕ್ಕೆ ಸಾಕಷ್ಟು ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವವರು ತೀರಾ ಅಗತ್ಯತೆಯನ್ನು ಹೊರತುಪಡಿಸಿ ಪ್ರಯಾಣ ಬೆಳೆಸದೆ ಇರುವುದು ಉತ್ತಮ.
►ಖಾಸಗಿ ವಾಹನಗಳಲ್ಲಿಯೂ ಸಂಚರಿಸುವವರಿಗೂ ಬಂದ್ ವೇಳೆ ಸುಗಮ ಸಂಚಾರ ಮಾಡಲು ಕಷ್ಟವಾಗುವ ಸಾಧ್ಯತೆಯಿದೆ. ಅಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಬೆಳೆಸುವುದು ಸೂಕ್ತ
► ಅಂಗಡಿಗಳು ಬಂದ್ ಆಗಿರುವುದರಿಂದ ಸಾಮಗ್ರಿ ಖರೀದಿ ಮಾಡಲು ಸಾಧ್ಯವಾಗದು. ಸಾಮಾಗ್ರಿ ಖರೀದಿಗಾಗಿ ಅಂಗಡಿಗಳತ್ತ ಪ್ರಯಾಣ ಬೆಳೆಸುವುದು ವ್ಯರ್ಥ ಪ್ರಯಾಣವಾಗಬಹುದು.
► ಶುಭಸಮಾರಂಭಗಳಿಗೆ ಹೋಗುವುದಿದ್ದರೆ ಆದಷ್ಟು ಬೇಗನೆ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ತೆರಳುವುದು ಉತ್ತಮ.
ಬಲವಂತದ ಬಂದ್‌ಗೆ ಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ:ಜಿಲ್ಲಾಧಿಕಾರಿ
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ.19 ರಂದು ನಡೆಯುವ ಸ್ವಯಂಪ್ರೇರಿತ ಬಂದ್ ಸಂದರ್ಭದಲ್ಲಿ ಯಾರದರೂ ಬಲವಂತದ ಬಂದ್‌ಗೆ ಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಯಾವುದೆ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತ ಬದ್ದವಾಗಿದೆ. ಬಲಾತ್ಕಾರವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯಾರಾದರೂ ಪ್ರಯತ್ನಿಸಿದರೆ ಅಥವಾ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಲ್ಲಿ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಮತ್ತು ಸಾರ್ವಜನಿಕರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.