ಬರಪರಿಸ್ಥಿತಿಯ ನಿಟ್ಟಿನಲ್ಲಿ ಜಲನಿರ್ವಹಣೆಗಾಗಿ ಜಿಲ್ಲಾಡಳಿತ ವತಿಯಿಂದ ವೈಜ್ಞಾನಿಕ ಅಧ್ಯಯನ
ಮಂಗಳೂರು ,ಮೇ 18: ದ.ಕ ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಹಾಗೂ ಮುಂದೆ ಉಂಟಾಗಬಹುದಾದ ತೀವ್ರ ಬರಪರಿಸ್ಥಿತಿಯ ನಿಟ್ಟಿನಲ್ಲಿ ಜಲನಿರ್ವಹಣೆಗಾಗಿ ಜಿಲ್ಲಾಡಳಿತ ವತಿಯಿಂದ ಆಳವಾದ ವೈಜ್ಞಾನಿಕ ಅಧ್ಯಯನ ಮತ್ತು ಜಿಲ್ಲೆಗೆ ಸಮಗ್ರ ಜಲನೀತಿ ರೂಪಿಸಬೇಕು ಮತ್ತು ಜಿಲ್ಲೆಯ ನೀರಿನ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಮುಖಂಡ ನಟೇಶ್ ಉಳ್ಳಾಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಲಭ್ಯವಿರುವ ಜಲಸಂಪನ್ಮೂಲ, ಔದ್ಯಮಿಕ ಬಳಕೆ, ಕೃಷಿಕ್ಷೇತ್ರ, ಕುಡಿಯಲು ಮತ್ತು ಇತರ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ನೀರು ಮತ್ತು ಮಿಗತೆ ನೀರಿನ ಪ್ರಮಾಣ ಸಾರ್ವಜನಿಕ ಹಿತಾಸಕ್ತಿಯ ವಿಚಾರ. ದೇಶ ಮತ್ತು ರಾಜ್ಯದಲ್ಲಿ ಜಲನೀತಿಗೆ ಮೊದಲ ಆದ್ಯತೆಯಿದೆ. ಆದರೆ ಜಿಲ್ಲೆಯ ವಿಚಾರವಾಗಿ ಜಲನೀತಿಗೆ ಮಹತ್ವ ನೀಡಿಲ್ಲ. ದೂರದೃಷ್ಟಿಯ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಹಿತ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಸಮರ್ಪಕ ಅಧ್ಯಯನ ನಡೆಸಲು ಸರ್ಕಾರವನ್ನು ಒತ್ತಾಯಿಸಬೇಕು. ಅಧ್ಯಯನದಲ್ಲಿ ತಿಳಿದುಬಂದ ಸತ್ಯಗಳನ್ನು ಸಾರ್ವಜನಿಕವಾಗಿ ತಿಳಿಸಿ ಜಲನೀತಿ ನಿರೂಪಿಸಬೇಕು. ಅದಕ್ಕಾಗಿ ಸ್ಥಾಪಿತ ಹಿತಾಸಕ್ತಿಗಳು ಈ ಅಧ್ಯಯನ ದಾರಿ ತಪ್ಪಿಸದಂತೆ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳು ಕ್ರಿಯಾತ್ಮಕವಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಚರಣೆಯಲ್ಲಿರುವ ಬೃಹತ್ ಉದ್ಯಮಸಂಸ್ಥೆಗಳು ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನೇತ್ರಾವತಿ ಜಲಾಶಯದಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸರ್ಕಾರ ಈ ಬಗ್ಗೆ ಜಲಾಶಯದಲ್ಲಿ ಮಾಪನಕೇಂದ್ರ ಅಳವಡಿಸದಿರುವುದರಿಂದ ಉದ್ಯಮಸಂಸ್ಥೆಗಳು ಹೆಚ್ಚು ಬಳಸಿಕೊಳ್ಳುವ ಪ್ರಮಾಣವನ್ನು ಲೆಕ್ಕಹಾಕಲು ಸಾಧ್ಯವಿಲ್ಲ ಎಂದು ವಿವರಿಸಿದ ಅವರು, ಸಮಗ್ರ ಜಲನೀತಿ ಸ್ಥಾಪಿಸಿದಲ್ಲಿ ಸರ್ಕಾರಕ್ಕೆ ಜಲನೀತಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಾಗದು. ಆಗ ಮಾತ್ರ ಜಿಲ್ಲೆಯ ನೀರಿನ ಸಮಸ್ಯೆ ಸಮತೋಲನ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಸ್ಥಾಪಕ ಸದಸ್ಯ ರಾಮಚಂದ್ರ ಭಟ್ , ಸಂಯೋಜಕ ಮಧುಕರ್ ಅಮೀನ್, ವೇದಿಕೆಯ ಕಾನೂನು ಸಂಯೋಜಕಿ ವಿದ್ಯಾ ದಿನಕರ್ ಹಾಗೂ ಪ್ರಮುಖರಾದ ದಿಲಿಪ್‌ವಾಸು ಉಪಸ್ಥಿತರಿದ್ದರು.