ಸಚಿವ ಅಭಯಚಂದ್ರ ಜೈನ್‌ರಿಂದ ಪುತ್ತಿಗೆ ಕಂಚಿಬೈಲು - ಅರ್ಬಿ ಅಣೆಕಟ್ಟು ಸ್ಥಳ ಪರಿಶೀಲನೆ

Update: 2016-05-18 13:58 GMT

ಮೂಡುಬಿದಿರೆ : ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತಿಗೆ ಕಂಚಿಬೈಲು ಪ್ರದೇಶದಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಇದೀಗ ಶಿಥಿಲಾವಸ್ಥೆಯಲ್ಲಿರುವ ಅರ್ಬಿ ಅಣೆಕಟ್ಟನ್ನು ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪರಿಸರದ ವಿವಿಧ ಗ್ರಾಮಗಳ ನಿವಾಸಿಗಳು ಪಾಲಡ್ಕ ಚರ್ಚ್‌ನ ರೆ ಫಾ ಐವನ್ ಮೈಕೆಲ್ ರೊಡ್ರಿಗಸ್ ಹಿರಿತನದಲ್ಲಿ ಶೀಥಿಲಾವಸ್ಥೆಯಲ್ಲಿರುವ ಅಣೆಕಟ್ಟನ್ನು ಅಭಿವೃದ್ಧಿಗೊಳಿಸಿದರೆ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಆದ್ದರಿಂದ ಬೇಗನೇ ಅಣೆಕಟ್ಟಿಗೆ ಕಾರ್ಯಕಲ್ಪ ನೀಡಬೇಕೆಂದು ಸಚಿವರಿಗೆ ಸ್ಥಳದಲ್ಲಿ ಮನವಿ ಅರ್ಪಿಸಿದರು.

ಈ ಅಣೆಕಟ್ಟು ಹೊಸದಾಗಿ ನಿರ್ಮಾಣವಾದಲ್ಲಿ ಪುತ್ತಿಗೆ, ಕಡಂದಲೆ, ಪಾಲಡ್ಕ, ಕಲ್ಲಮುಂಡ್ಕೂರು ಗ್ರಾಮಗಳ ಮಂದಿಗೆ ವಿಶೇಷವಾಗಿ ಕೃಷಿಕರಿಗೆ ಪ್ರಯೋಜನವಾಗಲಿದೆ. ಅಂತರ್ಜಲ ವೃದ್ಧಿಯಾಗಲಿದೆ, ಬೋರ್‌ವೆಲ್‌ಗಳಿಗೂ ಜೀವದಾನವಾಗಲಿದೆ. ಒಟ್ಟಿನಲ್ಲಿ ಈ ಪರಿಸರದ ನೀರಿನ ಮಟ್ಟದಲ್ಲಿ ಏರಿಕೆಯಾಗಲಿದೆ. ಮಾತ್ರವಲ್ಲ, ಪಾಲಡ್ಕ, ಮಾವಿನಕಟ್ಟೆ, ಬಿ.ಟಿ. ರೋಡ್, ಕೇಮಾರು, ಗುಡ್ಡೆಯಂಗಡಿ ಎತ್ತರದ ಮೊದಲಾದ ಪ್ರದೇಶಗಳಲ್ಲಿರುವ ಕಾಲನಿಗಳಿಗೆ ನೀರು ಒದಗಿಸಲೂ ಸಹಕಾರಿಯಾಗುತ್ತದೆ ಎಂದು ದ.ಕ. ಜಿ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸುಚರಿತ ಶೆಟ್ಟಿ ಅವರು ಸಚಿವರಿಗೆ ಮನವರಿಕೆ ಮಾಡಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಚಿವರು ಈ ಯೋಜನೆಯನ್ನು ಆದಷ್ಟು ಶೀಘ್ರವಾಗಿ ನೆರವೇರಿಸಿಕೊಡುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು. ಈ ಹೊಳೆಯಲ್ಲಿ ಸಾಧ್ಯವಿರುವಲ್ಲೆಲ್ಲ ಹೂಳೆತ್ತಿ ನೀರಿನ ಸೆಲೆಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ ಎಂದು ಸಣ್ಣ ನೀರಾವರಿ ಎಂಜಿನಿಯರ್‌ಷಣ್ಮುಗಂ ಅವರಿಗೆ ಸೂಚಿಸಿದರು.

ಜ್ಯೂ. ಎಂಜಿನಿಯರ್ ರಾಕೇಶ್, ಮಿತ್ತಬೈಲು ವಾಸುದೇವ ನಾಯಕ್, ಹರಿಪ್ರಸಾದ್ ಶೆಟ್ಟಿ, ಪಂ. ಸದಸ್ಯ ಜಗದೀಶ ಕೋಟ್ಯಾನ್, ನಾಗರಾಜ ಭಟ್, ಪ್ರವೀಣ್ ಸಿಕ್ವೇರಾ, ನವೀನ್ ಪೂಜಾರಿ, ಗಿರೀಶ್, ಎಡ್ವರ್ಡ್, ಫೌಸ್ತೀನ್ ಸಿಕ್ವೇರ , ಫೆಲಿಕ್ಸ್ ರೋಡ್ರಿಗಸ್, ಪಂ. ಸದಸ್ಯರಾದ ಫೆಲ್ಸಿ ಟೀಚರ್, ನಳಿನಿ ಪಾಲಡ್ಕ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News