ತಾ.ಪಂ. ಸದಸ್ಯೆಗೆ ನಿಂದನೆ: ಆರೋಪ
ಮಂಗಳೂರು, ಮೇ 18: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬೋರ್‌ವೆಲ್ ಉದ್ಘಾಟನೆಗೆ ಸಂಬಂಧಿಸಿ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ ಅವರ ಪತಿ ತನಗೆ ಅವಾಚ್ಯವಾಗಿ ನಿಂದಿಸಿರುವುದಾಗಿ ಉಳಾಯಿಬೆಟ್ಟು ತಾಲೂಕು ಪಂಚಾಯತ್ ಸದಸ್ಯೆ ಅಪ್ಸತ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ತಾನು ವಾಸವಾಗಿದ್ದ ಜ್ಯೋತಿನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವುದರಿಂದ ಅಲ್ಲಿನ ಸುಮಾರು 30 ಮಂದಿ ನಾಗರಿಕರು ಸಮಸ್ಯೆ ಪರಿಹಾರಿಸುವಂತೆ ತನ್ನ ಮನೆಗೆ ಬಂದು ಮನವಿ ಮಾಡಿದ್ದರು. ನಾಗರಿಕರ ಕೋರಿಕೆಯಂತೆ ತಾನು ಶಾಸಕ ಮೊದಿನ್ ಬಾವ ಅವರೊಂದಿಗೆ ಈ ವಿಷಯದಲ್ಲಿ ಚರ್ಚಿಸಿದಾಗ ಅವರು ಶಾಸಕರ ಅನುದಾನದಲ್ಲಿ ಜ್ಯೋತಿನಗರದಲ್ಲಿ ಬೋರ್‌ವೆಲ್‌ವೊಂದನ್ನು ನಿರ್ಮಿಸಿದ್ದರು. ಅದರ ಉದ್ಘಾಟನೆ ಸೋಮವಾರ ನಡೆಯಬೇಕಿತ್ತು. ಉದ್ಘಾಟನೆಗೆ ಶಾಸಕ ಮೊದಿನ್ ಬಾವ ಮತ್ತು ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್‌ರನ್ನು ಆಹಾನಿಸಿದ್ದೆವು. ಆದರೆ ಅಂದು ಶಾಸಕರು ಉದ್ಘಾಟನೆಗೊಳಿಸಬೇಕಿದ್ದ ಬೋರ್‌ವೆಲ್‌ನ್ನು ಹೇಮಲತಾ ಸಾಲ್ಯಾನ್‌ರ ಪತಿ ರಘು ಸಾಲ್ಯಾನ್ ಅವರು ಉದ್ಘಾಟಿಸಿ ತನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಅಪ್ಸತ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಸದಾಶಿವ ಅಮೀನ್, ಯುವ ಕಾಂಗ್ರೆಸ್ ಮುಖಂಡ ಸುಜಿತ್ ಶೆಟ್ಟಿ, ಅಪ್ಸತ್ ಅವರ ಪತಿ ಹಾಗೂ ಉಳಾಯಿಬೆಟ್ಟು ಮಾಜಿ ಗ್ರಾ.ಪಂ. ಸದಸ್ಯ ಹಸನಬ್ಬ, ಸುರತ್ಕಲ್ ಫಿರ್ಕಾ ರೈತ ಘಟಕದ ಅಧ್ಯಕ್ಷ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.