ಮಂಗಳೂರು: ವಿಕ್ಕಿ ಶೆಟ್ಟಿ ಸಹಚರನ ಬಂಧನ
Update: 2016-05-18 22:29 IST
ಮಂಗಳೂರು, ಮೇ 18: ನಗರದ ಉದ್ಯಮಿಗೆ ಹಫ್ತಾ ಹಣಕ್ಕಾಗಿ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತ್ತೂರಿನ ಶಶಿಧರ ಶೆಟ್ಟಿ(41) ಎಂದು ಗುರುತಿಸಲಾಗಿದೆ.
ಪನಾಮ ನೇಚರ್ ಪ್ರೆಶ್ ಪ್ರೈವೇಟ್ ಲಿಮಿಟೆಡ್ ನ ವಿವೇಕ್ ರಾಜ್ ಅವರ ಮೊಬೈಲ್‌ಗೆ ವಿದೇಶದಿಂದ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿ 2015 ರ ಡಿಸೆಂಬರ್31 ರಂದು ಕರೆಮಾಡಿ ಹಫ್ತಾ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದಾಗ ಉದ್ಯಮಿಯ ಮಾಹಿತಿಯನ್ನು ಶಶಿಧರ ಶೆಟ್ಟಿ ನೀಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.