ಮಾಸಾಂತ್ಯದ ಒಳಗಾಗಿ ಸಿಬಿಎಸ್‌ಇ ಫಲಿತಾಂಶ: ಇರಾನಿ
ಹೊಸದಿಲ್ಲಿ, ಮೇ 18: ಸಿಬಿಎಸ್‌ಇ ಮಂಡಳಿಯ 10 ಮತ್ತು 12ನೆ ತರಗತಿ ಫಲಿತಾಂಶವನ್ನು ಈಗಾಗಲೇ ನಿರ್ಧರಿಸಿದಂತೆ ಈ ತಿಂಗಳ ಕೊನೆಯ ಒಳಗಾಗಿ ಪ್ರಕಟಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, ಧನಬಾದ್‌ನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಸಂಸ್ಥೆಯನ್ನು ಐಐಟಿಯಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಟಿಪ್ಪಣಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.
ಸಿಬಿಎಸ್‌ಇ ಫಲಿತಾಂಶ ವಿಳಂಬವಾಗುತ್ತದೆಯೇ ಎಂದು ವಿದ್ಯಾರ್ಥಿಯೊಬ್ಬ ಸಂಶಯ ವ್ಯಕ್ತಪಡಿಸಿದಾಗ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಫಲಿತಾಂಶ ನಿಗದಿತ ಅವಧಿಗೇ ಬರುತ್ತದೆ ಎಂದು ಭರವಸೆ ನೀಡಿದರು. ಎಲ್ಲ ಫಲಿತಾಂಶಗಳನ್ನು ಮೇ 31ರೊಳಗೆ ಪ್ರಕಟಿಸುವಂತೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲೇ ಎಲ್ಲ ರಾಜ್ಯಗಳ ಶಿಕ್ಷಣ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಒಂದು ಗಂಟೆಯ ಸಂವಾದದಲ್ಲಿ ಸುಮಾರು ಎರಡು ಸಾವಿರ ಪ್ರಶ್ನೆಗಳು ಸಚಿವೆಗೆ ತೂರಿಬಂದವು. ಈ ಪೈಕಿ ಬಹುತೇಕ ಪ್ರಶ್ನೆಗಳು ಎನ್‌ಇಇಟಿ ಪರೀಕ್ಷೆಗೆ ಸಂಬಂಧಿಸಿದ್ದು. ಆದರೆ ಇದು ಆರೋಗ್ಯ ಸಚಿವಾಲಯದ ವ್ಯಾಪ್ತಿಗೆ ಬರುವ ವಿಚಾರವಾದ್ದರಿಂದ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಸಚಿವೆ ಹೇಳಿದರು.
ಹೊಸ ಶಿಕ್ಷಣ ನೀತಿಯ ಕರಡನ್ನು ಟಿ.ಎಸ್.ಆರ್.ಸುಬ್ರಮಣಿಯನ್ ಸಮಿತಿ ಸದ್ಯದಲ್ಲೇ ಸಲ್ಲಿಸಲಿದೆ ಎಂದು ಸ್ಪಷ್ಟಪಡಿಸಿದರು. ಜಮ್ಮು ಕಾಶ್ಮೀರದಲ್ಲಿ ಹೊಸ ಐಐಟಿ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.