ಪ್ರತಿ ರಾಷ್ಟ್ರೀಯ ಆಸ್ತಿಗೂ ಗಾಂಧಿಗಳ ಹೆಸರೇಕೆ..?
ಮುಂಬೈ,ಮೇ 18: ಕಾಂಗ್ರೆಸ್ ಆಡಳಿತದಲ್ಲಿ ರಾಷ್ಟ್ರದ ಎಲ್ಲ ಪ್ರಮುಖ ಆಸ್ತಿಗಳಿಗೆ ಗಾಂಧಿ ಕುಟುಂಬ ಸದಸ್ಯರ ಹೆಸರುಗಳನ್ನೇ ಇರಿಸುವ ಪರಿಪಾಠವನ್ನು ಬಾಲಿವುಡ್ ನಟ ರಿಷಿ ಕಪೂರ್ ಅವರು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದಾರೆ. ಇತ್ತೀಚಿಗಷ್ಟೇ ಅಸಹಿಷ್ಣುತೆಯಂತಹ ವಿಷಯಗಳ ಕುರಿತಂತೆ ಕೇಸರಿ ಶಕ್ತಿಗಳನ್ನು ಟೀಕಿಸಿದ್ದ 63ರ ಹಿರಿಯ ನಟ ಈ ಬಾರಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಸ್ಥಳಗಳ ಹೆಸರುಗಳನ್ನು ಬದಲಿಸಿ ದೇಶದ ಕಲ್ಯಾಣಕ್ಕಾಗಿ ದುಡಿದವರ ಹೆಸರುಗಳನ್ನು ಇಡಬೇಕು ಎಂದಿರುವ ರಿಷಿ, ಕಾಂಗ್ರೆಸ್ ಗಾಂಧಿ ಕುಟುಂಬದವರ ಹೆಸರುಗಳನ್ನಿರಿಸಿರುವ ರಾಷ್ಟ್ರೀಯ ಆಸ್ತಿಗಳನ್ನು ಪುನರ್‌ನಾಮಕರಣಗೊಳಿಸಬೇಕು. ಬಾಂದ್ರಾ/ವರ್ಲಿ ಸಮುದ್ರ ಸೇತುವೆಗೆ ಲತಾ ಮಂಗೇಶ್ಕರ್ ಅಥವಾ ಜೆಆರ್‌ಡಿ ಟಾಟಾ ಲಿಂಕ್ ರೋಡ್ ಎಂದು ಹೆಸರಿಡಬೇಕು. ಇವೆಲ್ಲ ತಮ್ಮ ಕುಟುಂಬದ ಆಸ್ತಿಗಳು ಎಂದು ಅವರು ತಿಳಿದುಕೊಂಡಿದ್ದಾರೆಯೇ ಎಂದು ಕಿಡಿಕಾರಿದ್ದಾರೆ.
ದಿಲ್ಲಿಯ ರಸ್ತೆಗಳ ಹೆಸರುಗಳನ್ನು ಬದಲಿಸಬಹುದಾಗಿದ್ದರೆ ಕಾಂಗ್ರೆಸ್ ಗಾಂಧಿಗಳ ಮುಡಿಗೆ ಒಪ್ಪಿಸಿರುವ ಇಂತಹ ಆಸ್ತಿಗಳ ಹೆಸರುಗಳನ್ನೇಕೆ ಬದಲಿಸಲು ಸಾಧ್ಯವಿಲ್ಲ? ಇತ್ತೀಚಿಗೆ ಚಂಡಿಗಡಕ್ಕೆ ಭೇಟಿ ನೀಡಿದ್ದೆ...ಅಲ್ಲಿಯೂ ರಾಜೀವ್ ಗಾಂಧಿ ಹೆಸರಿನ ರಾಷ್ಟ್ರೀಯ ಆಸ್ತಿ..! ಯೋಚಿಸಿ ಸ್ನೇಹಿತರೇ ಎಂದು ಅವರು ಟ್ವೀಟಿಸಿದ್ದಾರೆ.
ರಾಷ್ಟ್ರೀಯ ಕಟ್ಟಡಗಳಿಗೆ ಚಿತ್ರರಂಗದ ಗಣ್ಯರ ಹೆಸರುಗಳನ್ನೂ ಇಡಬೇಕು . ಸಮಾಜಕ್ಕೆ ಕೊಡುಗೆ ನೀಡಿದವರ ಹೆಸರುಗಳನ್ನು ಮಹತ್ವದ ರಾಷ್ಟ್ರೀಯ ಆಸ್ತಿಗಳಿಗಿಡಬೇಕು. ಪ್ರತಿಯೊಂದಕ್ಕೂ ಗಾಂಧಿ ಹೆಸರು! ಇದು ನನಗಿಷ್ಟವಿಲ್ಲ ಎಂದಿರುವ ಅವರು, ಫಿಲ್ಮ್ ಸಿಟಿಗೆ ದಿಲೀಪ್ ಕುಮಾರ್, ದೇವ್ ಆನಂದ್, ಅಶೋಕ ಕುಮಾರ್ ಅಥವಾ ಅಮಿತಾಭ್ ಬಚ್ಚನ್ ಹೆಸರನ್ನೇಕೆ ಇಡಬಾರದು? ಈ ರಾಜೀವ್ ಗಾಂಧಿ ಉದ್ಯೋಗ್ ಎಂದರೇನು? ಯೋಚಿಸಿ ಮಿತ್ರರೇ ಎಂದು ರಿಷಿ ಕುಟುಕಿದ್ದಾರೆ.