ಗೋಧ್ರಾ ರೈಲಿಗೆ ಬೆಂಕಿ: ಪ್ರಮುಖ ಆರೋಪಿ ಬಂಧನ

Update: 2016-05-18 18:24 GMT

ಅಹ್ಮದಾಬಾದ್, ಮೇ 18: ಗುಜರಾತ್‌ನ ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯ ಸಜೀವ ದಹನಕ್ಕೆ ಕಾರಣವಾದ ಘಟನೆಯ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿರುವ ಫಾರೂಕ್ ಭಾನಾ ಎಂಬಾತನನ್ನು ಪೊಲೀಸರು ಘಟನೆ ನಡೆದು ಹದಿನಾಲ್ಕು ವರ್ಷಗಳ ಬಳಿಕ ಬಂಧಿಸಿದ್ದಾರೆ.

ಪೊಲೀಸ್ ಆರೋಪಪಟ್ಟಿಯ ಪ್ರಕಾರ ಪಾಲಿಕೆಯ ಮಾಜಿ ಸದಸ್ಯ ಫಾರೂಕ್, 2002ರ ಫೆಬ್ರವರಿ 27ರಂದು ಗೋಧ್ರಾದ ಅತಿಥಿಗೃಹವೊಂದರಲ್ಲಿ 20 ಮಂದಿಯನ್ನು ಭೇಟಿ ಮಾಡಿ ಈ ಸಂಚಿನ ಮಾತುಕತೆ ನಡೆಸಿದ್ದ.

ರೈಲಿನಲ್ಲಿ ತಡರಾತ್ರಿ ಬಾಂಬ್ ಇಡುವ ಸಂಚನ್ನು ಇಲ್ಲಿ ರೂಪಿಸಲಾಯಿತು. ಉತ್ತರ ಪ್ರದೇಶಕ್ಕೆ ಕರಸೇವೆಗೆ ತೆರಳಿದ್ದ ಸ್ವಯಂಸೇವಕರು ವಾಪಸಾಗುತ್ತಿದ್ದ ರೈಲಿನಲ್ಲಿ ಬಾಂಬ್ ಇಡಲು ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇವು ಪೊಲೀಸರ ಆರೋಪಗಳಾಗಿವೆ.

ಗೋಧ್ರಾ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆಯೇ ಈ ಗುಂಪಿನ ಹಲವು ಮಂದಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇದರಲ್ಲಿ 59 ಮಂದಿ ಮೃತಪಟ್ಟರು. ಸತ್ತವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು. ಗೋಧ್ರಾ ದಾಳಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ವ್ಯಾಪಕ ಕೋಮುದಳ್ಳುರಿ ಆವರಿಸಿಕೊಂಡಿತ್ತು. ಈ ಹಿಂಸಾಚಾರದಲ್ಲಿ 1,100ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

ಫಾರೂಕ್ ಭಾನಾ ತಲೆಮರೆಸಿಕೊಂಡಿದ್ದುದರಿಂದ ಆತನ ಬಂಧನ ತಡವಾಯಿತು. ಬುಧವಾರ ಕೇಂದ್ರ ಗುಜರಾತ್‌ನ ಕಲೋಲ್ ಟೋಲ್ ನಾಕಾ ಬಳಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ 30ಕ್ಕೂ ಹೆಚ್ಚುಮಂದಿಯನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News