ಜನಾದೇಶವನ್ನು ಸ್ವೀಕರಿಸಿ ಇನ್ನಷ್ಟು ಶ್ರಮಿಸುತ್ತೇವೆ : ರಾಹುಲ್ ಗಾಂಧಿ
ಹೊಸದಿಲ್ಲಿ, ಮೇ 19 : ಜನರ ವಿಶ್ವಾಸ ಹಾಗೂ ನಂಬಿಕೆ ಗಳಿಸುವ ಸಲುವಾಗಿ ಕಾಂಗ್ರೆಸ್ ಇನ್ನೂ ಹೆಚ್ಚು ಶ್ರಮಿಸಲಿದೆ. ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಜನಾದೇಶವನ್ನು ಪಕ್ಷ ವಿನಮ್ರವಾಗಿ ಒಪ್ಪಿಕೊಂಡಿದೆ ಹಾಗೂ ವಿಜೇತ ಪಕ್ಷಗಳಿಗೆ ಅಭಿನಂದನೆ ಸಲ್ಲಿಸುತ್ತದೆ, ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷ ತಾನು ಆಡಳಿತದಲ್ಲಿದ್ದ ಅಸ್ಸಾಂ ಹಾಗೂ ಕೇರಳದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವುದು ಹಾಗೂಪಶ್ಮಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಬೆಂಬಲ ಗಳಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಮೇಲಿನ ಹೇಳಿಕೆ ನೀಡಿದ್ದಾರೆ.
‘‘ಚುನಾವಣಾ ಪ್ರಚಾರಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ಕಾರ್ಯಕರ್ತರಿಗೆ, ಮಿತ್ರ ಪಕ್ಷಗಳಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳಲಿಚ್ಛಿಸುತ್ತೇನೆ,’’ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.
ಫಲಿತಾಂಶದಿಂದ ತಮಗಾದ ನಿರಾಸೆಯನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅದೇ ಸಮಯ ಫಲಿತಾಂಶ ಅನಿರೀಕ್ಷಿತವೇನಲ್ಲ ಎಂದು ಬಣ್ಣಿಸಿದ್ದಾರೆ.
ಜನರು ಬದಲಾವಣೆ ಬಯಸಿದ್ದರಿಂದ ಅಸ್ಸಾಂನಲ್ಲಿ ಪಕ್ಷ ಸೋಲನ್ನನುಭವಿಸಿದೆ ಎಂದು ಹೇಳಿದ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿ ತೃಣಮೂಲ ಕಾಂಗ್ರೆಸ್ ಮೇಲೆ ಯಾವುದೇ ಪ್ರಭಾವ ಬೀರಲು ವಿಫಲವಾಗಿರುವ ಹೊರತಾಗಿಯೂ ಎರಡೂ ಪಕ್ಷಗಳ ಮೈತ್ರಿ ಸಹಜ ಎಂದಿದ್ದಾರೆ.