ಜಿಲ್ಲಾ ಬಂದ್‌ಗೆ ಮೂಡುಬಿದಿರೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಮೂಡುಬಿದಿರೆ, ಮೇ 19: ಎತ್ತಿನಹೊಳೆ ಯೋಜನೆ ವಿರೋಧಿಸಿ ದ.ಕ. ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮನವಿಗೆ ಮೂಡುಬಿದಿರೆಯಲ್ಲಿ ಬಸ್‌ಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರೆ, ಉಳಿದಂತೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.
ಬಸ್ ಬಂದ್ ಇದ್ದುದರಿಂದ ದಿನಂಪ್ರತಿ ಆ ಸಾರಿಗೆಯನ್ನು ನೆಚ್ಚಿಕೊಂಡಿದ್ದ ಕಾರ್ಮಿಕರು, ಹಾಗೂ ವರ್ತಕರು ಮೂಡುಬಿದಿರೆ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಉಳಿದಂತೆ ಮೂಡುಬಿದಿರೆಯಲ್ಲಿ ಯಥಾ ಪ್ರಕಾರ ವಾಹನಗಳು ಹಾಗೂ ಅಲ್ಲಲ್ಲಿ ಅಲ್ಪಸ್ವಲ್ಪ ಜನಸಂದಣಿ ಕಾಣಿಸಿಕೊಂಡಿದೆ. ಕೆಲವು ಬ್ಯಾಂಕ್‌ಗಳು, ಮಾರುಕಟ್ಟೆಯಲ್ಲಿ ಕೆಲವು ತರಕಾರಿ ಅಂಗಡಿಗಳು, ಔಷಧ ಅಂಗಡಿ, ಚಿನ್ನದ ಅಂಗಡಿಗಳು, ಕೆಲವು ಶಾಪಿಂಗ್ ಸೆಂಟರ್‌ಗಳು ತೆರೆದಿದ್ದು, ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ಮಾತ್ರವೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಬಸ್ಸುಗಳ ಓಡಾಟ ಇಲ್ಲದಿರುವುದರಿಂದ ನಿಲ್ದಾಣದಲ್ಲಿ ಜನರ ಓಡಾಟ ವಿರಳವಾಗಿದ್ದರಿಂದ ಎತ್ತಿನ ಹೊಳೆ ಯೋಜನೆ ವಿರುದ್ಧದ ಬಂದ್‌ನ ಬಿಸಿ ಅಷ್ಟೇನೂ ತೀವ್ರವಾಗಿರಲಿಲ್ಲ ಎಂದು ಹೇಳಬಹುದಾಗಿದೆ.
ಕೆಲವು ವ್ಯಾಪಾರ ಕೇಂದ್ರಗಳಿಗೆ ಕಾರ್ಮಿಕರು ತಲುಪಲು ಸಾಧ್ಯವಾಗದೇ ಇದ್ದುದರಿಂದ ಬಂದ್ ಇದ್ದು, ಮೂಡುಬಿದಿರೆ ಮಾರುಕಟ್ಟೆಯ ಕೆಲವು ಅಂಗಡಿಗಳಲ್ಲಿ ವ್ಯಾಪಾರ ನಡೆದಿದೆ. ತರಕಾರಿ ಹಾಗೂ ಮೀನು ಮಾರಾಟಕ್ಕೆ ಯಾವುದೇ ತಡೆಯಿರಲಿಲ್ಲವಾದರೂ, ಗ್ರಾಹಕರ ಸಂಖ್ಯೆ ಇಳಿಮುಖವಾದ್ದರಿಂದ ಮಾರಾಟವೂ ನಿಧಾನಗತಿಯಲ್ಲಿ ಸಾಗಿದೆ.
ಮೂಡುಬದಿರೆಯ ಎಲ್ಲಾ ಆಟೊ ಪಾರ್ಕ್‌ಗಳು ಹಾಗೂ ಟೂರಿಸ್ಟ್ ಕ್ಯಾಬ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮೂಡುಬಿದಿರೆ ಹೋಬಳಿಯ ಬೆಳುವಾಯಿ, ಹೊಸಬೆಟ್ಟು, ಶಿರ್ತಾಡಿ, ವಾಲ್ಪಾಡಿ, ನೆಲ್ಲಿಕಾರು, ಪಡುಮಾರ್ನಾಡು, ಇರುವೈಲು ಗ್ರಾ.ಪಂ. ವ್ಯಾಪ್ತಿಗಳಲ್ಲೂ ವಾಹನ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಬಸ್‌ಗಳು ಮಾತ್ರವೇ ಬಂದ್‌ಗೆ ಬೆಂಬಲವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಉಳಿದಂತೆ ಎಲ್ಲಾ ಖಾಸಗಿ ಕಾರ್ಯಕ್ರಮಗಳೂ ಕೂಡಾ ಯಾವುದೇ ಅಡೆತಡೆಯಿಲ್ಲದ ಸಾಗುತ್ತಿದ್ದು, ಎಲ್ಲಿಯೂ ಕೂಡಾ ಹಿಂಸಾಚಾರದ ಬಗ್ಗೆ ವರದಿಯಾಗಿಲ್ಲ. ಮೂಡುಬಿದಿರೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಪಕ ಬಂದೋಬಸ್ತು ಏರ್ಪಡಿಸಿದ್ದಾರೆ.