ಬೆಳ್ತಂಗಡಿ: ಜಿಲ್ಲಾ ಬಂದ್‌ಗೆ ಸಂಪೂರ್ಣ ಬೆಂಬಲ
ಬೆಳ್ತಂಗಡಿ, ಮೇ 19: ಎತ್ತಿನಹೊಳೆ ಯೋಜನೆ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳು ಕರೆ ನೀಡಿದ ದ.ಕ. ಜಿಲ್ಲಾ ಬಂದ್‌ಗೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಬಂದ್ ಅತ್ಯಂತ ಶಾಂತಿಯುತವಾಗಿ ನಡೆದಿದೆ.
ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಲಾಲ ಕಾಶಿಬೆಟ್ಟು ಬಳಿ ಯಾರೋ ಕಿಡಿಕೇಡಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿದರು. ಕೂಡಲೇ ಅಗ್ನಿ ಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಉಜಿರೆ, ಬೆಳ್ತಂಗಡಿ ಸಂತೆಕಟ್ಟೆ, ಕನ್ಯಾಡಿ, ಗುರುವಾಯನಕೆರೆ ಮುಂತಾದೆಡೆ ಟಯರ್‌ಗೆ ಬೆಂಕಿಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಬಸ್‌ಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ರಸ್ತೆಗೆ ಇಳಿಯಲಿಲ್ಲ. ಸರಕಾರಿ ಬಸ್‌ಗಳು ಬೆಳಗ್ಗೆ ಸಂಚಾರವನ್ನು ಆರಂಭಿಸಿದರೂ ವಿವಿಧೆಡೆಗಳಲ್ಲಿ ವಾಹನಗಳನ್ನು ತಡೆದ ಹಿನ್ನಲೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳ ಹಾಗೂ ಮಂಗಳೂರಿಗೆ ಬರುತ್ತಿದ್ದ ವಾಹನಗಳನ್ನು ಕೊಟ್ಟಿಗೆಹಾರ ಹಾಗೂ ಸಕಲೇಶಪುರದಲ್ಲಿ ನಿಲ್ಲಿಸಲಾಗಿತ್ತು. ತಾಲೂಕಿನಾದ್ಯಂತ ಬಹುತೇಕ ಅಂಗಡಿ-ಮುಂಗಟ್ಟುಗಳು ಬೆಳಗ್ಗಿನಿಂದಲೇ ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿದ್ದವು. ಕೆಲವೆಡೆ ಅಂಗಡಿಗಳು ಅಂಗಡಿಗಳು ಬಾಗಿಲು ತೆರೆದಿದ್ದರೂ ಬಂದ್ ಬೆಂಬಲಿಗರ ಮನವಿಯ ಮೇರೆಗೆ ಬಾಗಿಲು ಮುಚ್ಚಿದವು.
ತಾಲೂಕಿನ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಗುರುವಾಯನಕೆರೆ, ಮಡಂತ್ಯಾರು, ವೇಣೂರು, ಅಳದಂಗಡಿ, ನಾರಾವಿ, ಮುಂಡಾಜೆ ಸೇರಿದಂತೆ ಬಹುತೇಕ ನಗರಗಳಲ್ಲಿ ಸಂಪೂರ್ಣ ಬಂದ್‌ಗೆ ಬೆಂಬಲ ವ್ಯಕ್ತವಾಗಿತ್ತು. ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.
ತಾಲೂಕು ಕೇಂದ್ರ ಬೆಳ್ತಂಗಡಿಯಲ್ಲಿ ಬಂದ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ನೇತ್ರಾವತಿ ಹೋರಾಟ ಸಮಿತಿ ಸಂಚಾಲಕ ಪುಷ್ಪರಾಜ್ ಶೆಟ್ಟಿ, ನಮ್ಮ ಜೀವನಾಡಿಯಾದ ನೇತ್ರಾವತಿ ಉಳಿಸುವಿಕೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಇದಕ್ಕೆ ಯಾವುದೇ ರೀತಿಯ ತಡೆವೊಡ್ಡಿದರೂ ಅದನ್ನು ಸಹಿಸಲಾರೆವು. ನಾವಿಂದು ತಾಲೂಕಿನಲ್ಲಿ ನೇತ್ರಾವತಿ ಉಳಿವಿಕೆಗಾಗಿ ಎರಡನೆ ಬಾರಿಗೆ ಶಾಂತಿಯುತ ಬಂದ್‌ಗೆ ಕರೆ ನೀಡಿದ್ದು ತಾಲೂಕಿನ ಜನತೆ ಜಾತಿಮತ ಬೇಧವಿಲ್ಲದೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದು ಸರಕಾರಕ್ಕೆ ಶಾಂತಿಯುತ ಹೋರಾಟದ ಎಚ್ಚರಿಕೆ. ಮುಂದೆ ನೇತ್ರಾವತಿ ತಿರುವು ಯೋಜನೆಯ ಬಗ್ಗೆ ನೈಜ ಅಧ್ಯಯನ ನಡೆಸಲಿ. ಇದರ ಸಾಧಕ ಬಾದಕಗಳ ಬಗ್ಗೆ ತಾಲೂಕಿನ ಜನತೆಯ ಮುಂದೆ ಸರಕಾರವಾಗಲೀ ಅಥವಾ ಅಧಿಕಾರಿಗಳಾಗಲೀ ಮಂಡಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಕೋಶಾಧಿಕಾರಿ ಹರೀಶ್ ಪೂಂಜ, ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಅಕ್ಬರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಶಶಿಕಿರಣ್ ಜೈನ್, ಬಾಲಕೃಷ್ಣ ಸವಣಾಲು, ಅಭಿನಂದನ್ ಹರೀಶ್ ಕುಮಾರ್, ಶೈಲೇಶ್ ಆರ್. ಜೆ., ಭಾಸ್ಕರ ಧರ್ಮಸ್ಥಳ. ಪ್ರಸಾದ್ ಶೆಟ್ಟಿ ಎಣಿಂಜೆ, ಜನಾರ್ದನ ಬಂಗೇರ ಮೂಡಾಯಿಗುತ್ತು, ದಿನೇಶ್ ಮುಗುಳಿ, ಭರತ್ ಕುಮಾರ್ ಇಂದಬೆಟ್ಟು, ಅರಿಹಂತ್ ಜೈನ್, ನಾಗೇಶ್ ಪೈ, ಜನಾರ್ದನ ಸುದೆಮುಗೇರು, ಹರೀಶ್ ಜಿ.ವಿ. ಸವಣಾಲು, ರಾಜೇಶ್ ಶೆಟ್ಟಿ ಲಾಲ, ವಕೀಲರಾದ ದಿನೇಶ್, ಪ್ರಶಾಂತ್, ಪ್ರಕಾಶ್ ಕಾಶಿಬೆಟ್ಟು, ಉಮೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ದಿನೇಶ್ ರೆಂಕೆದಗುತ್ತು, ರಶೀದ್ ಸಂಜಯನಗರ, ಹಾಗೂ ನೂರಾರು ಹೋರಾಟಗಾರರು ಭಾಗವಹಿಸಿದ್ದರು.