ಉಳ್ಳಾಲ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಉಳ್ಳಾಲ, ಮೇ 19: ವಿವಿಧ ಸಂಘಟನೆಗಳು ಎತ್ತಿನಹೊಳೆ ಯೋಜನೆ ವಿರೋಧಿಸಿ ಗುರುವಾರ ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ಉಳ್ಳಾಲ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಯಾವುದೇ ಬಸ್‌ಗಳು ರಸ್ತೆಗಿಳಿಯಲಿಲ್ಲ.
ತೊಕ್ಕೊಟ್ಟು ಮತ್ತು ಉಳ್ಳಾಲ ಜಂಕ್ಷನ್‌ನಲ್ಲಿ ಅಂಗಡಿ, ಮುಂಗಟ್ಟುಗಳು ಬೆಳಗ್ಗೆಯಿಂದಲೇ ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದರೆ, ಒಳಪೇಟೆಯಲ್ಲಿ ಅಂಗಡಿ, ಹೋಟೇಲುಗಳು ತೆರದಿದ್ದು ಎಂದಿನಂತೆ ವಹಿವಾಟು ನಡೆಸಿದವು. ದೇರಳಕಟ್ಟೆ, ಕುತ್ತಾರ್ ಮುಂತಾದ ಕಡೆಗಳಲ್ಲಿ ಕೆಲವು ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಮುಡಿಪುವಿನಲ್ಲಿ ಬೆರಳೆಣಿಕೆಯ ಅಂಗಡಿಗಳು ಮಾತ್ರ ತೆರೆದಿದ್ದವು. ವಾಹನ ಸಂಚಾರವೂ ಬೆರಳೆಣಿಕೆಯಷ್ಟಿದ್ದು ಬಂದ್‌ಗೆ ಉತ್ತಮ ರೀತಿಯಲ್ಲಿ ಬೆಂಬಲ ವ್ಯಕ್ತವಾಯಿತು.
ಆದರೆ ಈ ಭಾಗದಲ್ಲಿ ಬಸ್ ಹೊರತುಪಡಿಸಿ ಇತರ ವಾಹನಗಳು ಎಂದಿನಂತೆ ಸಂಚರಿಸಿದರೂ, ಜನಸಂಚಾರ ಕಡಿಮೆಯಿತ್ತು. ಎಲ್ಲೂ ಬಲವಂತದ ಬಂದ್ ನಡೆಯಲಿಲ್ಲ. ತೊಕ್ಕೊಟ್ಟಿನಲ್ಲಿ ಬೆಳಗ್ಗಿನಿಂದಲೇ ವರ್ತಕರು ಅಂಗಡಿಗಳ ಬಾಗಿಲು ತೆರೆಯದೆ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಟೊರಿಕ್ಷಾಗಳು ಎಂದಿನಂತೆ ಸಂಚರಿಸಿದವು.
ಇನೋಳಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಪಾವೂರು ಗ್ರಾಮದ ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಪ್ರಥಮ ವಾರ್ಷಿಕ ಉತ್ಸವ ಗುರುವಾರ ನಡೆಯಿತು. ಗುರುವಾರ ಬಂದ್ ಇದ್ದ ಕಾರಣ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಅನ್ನದಾನಕ್ಕೆ ಮುನ್ನ ಸಾಮೂಹಿಕ ಪ್ರಾರ್ಥನೆ ನಡೆದಿದ್ದು, ಯೋಜನೆ ಕೈಬಿಡುವಂತಾಗಲು ದೇವರು ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಸಬ್ಧುದ್ಧಿ ನೀಡಲಿ ಎಂದು ಪ್ರಾರ್ಥಿಸಲಾಯಿತು.