×
Ad

ಸುಳ್ಯ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Update: 2016-05-19 18:33 IST

ಸುಳ್ಯ, ಮೇ 19: ಎತ್ತಿನಹೊಳೆ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ನೇತ್ರಾವತಿ ಹೋರಾಟ ಸಮಿತಿ ಕರೆ ನೀಡಿದ ಜಿಲ್ಲಾ ಬಂದ್‌ಗೆ ಸುಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ವಾಹನ ಸಂಚಾರ, ಬ್ಯಾಂಕ್ ವಹಿವಾಟುಗಳು, ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯವಹಾರ ನಡೆಸಿದ್ದು, ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ನೇತ್ರಾವತಿ ಹೋರಾಟ ಸಮಿತಿ ನಡೆಸಿದ ಜಾಗೃತಿ ಸಬೆಯಲ್ಲಿ ಯೋಜನೆ ಕೈ ಬಿಡುವಂತೆ ನಾಯಕರು ಆಗ್ರಹಿಸಿದರು. ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರಾವತಿ ಹೋರಾಟ ಸಮಿತಿಯ ತಾಲೂಕು ಘಟಕದಿಂದ ಪ್ರತಿಭಟನಾ ಜಾಗೃತಿ ಸಭೆಯು ಸುಳ್ಯ ಹಳೆ ಬಸ್ ನಿಲ್ದಾಣದಲ್ಲಿ ಗುರುವಾರ ನಡೆಯಿತು.

ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ವಿನಯ ಕಂದಡ್ಕ, ಕರಾವಳಿಯನ್ನು ಬರಿದಾಗಿಸುವ ಎತ್ತಿನಹೊಳೆ ಯೋಜನೆ ಕಾರ್ಯ ಸಾಧ್ಯ ಆಗದ ಯೋಜನೆ. ಯೋಜನೆಗೆ ಅನುದಾನ ಬಂದದನ್ನು ಮುಗಿಸುವ ಮೂಲಕ ಹಲವು ಭ್ರಷ್ಟಾಚಾರಗಳಿಗೆ ದಾರಿ ಮಾಡಿಕೊಡುತ್ತಿದೆ. ಕೋಟಿ ಲೆಕ್ಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನೀರು ಸಾಗಿಸುವ ಪೈಪುಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.

ಭ್ರಷ್ಟಾಚಾರ ಮಾಡಲು ಮಾತ್ರ ಎತ್ತಿನಹೊಳೆ ಯೋಜನೆ ಆಗುತ್ತಿದೆ ಹೊರತು ಯಾರ ಉದ್ದಾರಕ್ಕೆ ಕೂಡ ಅಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಈ ಯೋಜನೆ ಎತ್ತಿಕೊಂಡು ಜನರನ್ನು ವಂಚಿಸುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹೆಕ್ಟರ್‌ಗಟ್ಟಲೆ ಅರಣ್ಯ, ಕೃಷಿ ನಾಶ ಆಗುತ್ತಿದೆ. ಪರಿಸರ ಇಲಾಖೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ ಇಲ್ಲಿ ಹತ್ತು-ಇಪ್ಪತ್ತು ಎಕರೆ ಅರಣ್ಯ ಪ್ರದೇಶದೊಳಗೆ ವಿದ್ಯುತ್ ಲೈನ್ ಹಾದು ಹೋಗಬೇಕಾದರೆ ಅದಕ್ಕೆ ಅರಣ್ಯ ಇಲಾಖೆ ಆಕ್ಷೇಪ ಮಾಡುತ್ತಿದೆ ಎಂದು ಹೇಳಿದರು.

ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ ಮಾತನಾಡಿ, ನೇತ್ರಾವತಿ ತಿರುಗಿಸುವ ಮೂಲಕ ಎತ್ತಿನಹೊಳೆ ಯೋಜನೆ ವಿರುದ್ಧ ನಾವು ಈಗಲೇ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನಾವು ದೊಡ್ಡ ತೊಂದರೆ ಅನುಭವಿಸಲಿದ್ದೇವೆ. ಇದಕ್ಕೆ ಎಲ್ಲಾ ಸಂಘಟನೆಗಳ ಬೆಂಬಲ ಅಗತ್ಯ ಇದೆ. ನಾವು ಅಂಗಡಿ ಬಂದ್ ಮಾಡಿ ರಸ್ತೆಗೆ ಇಳಿಯುವ ಅಗತ್ಯ ಇಲ್ಲ ಬದಲಾಗಿ ನಮ್ಮ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ನೇತ್ರಾವತಿ ತಿರುಗಿಸುವ ಯೋಜನೆ ಅಲ್ಲ. ಬದಲಾಗಿ ನಮ್ಮ ಜೀವವನ್ನು ತಿರುಗಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಜಾತಿ, ಮತ, ಧರ್ಮಗಳ ಬೇಧ ಭಾವ ಇಲ್ಲದೇ ಹೋರಾಟ ಮಾಡಿದರೆ ನಮಗೆ ಖಂಡಿತ ಜಯ ಸಿಗುತ್ತದೆ. ಈ ಯೋಜನೆಯ ಮೂಲಕ ಜನಪ್ರತಿನಿಧಿಗಳು ಅಲ್ಲಿನ ಮತದಾರರ ಖುಷಿ ಪಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖಂಡರುಗಳಾದ ಉಮೇಶ್ ವಾಗ್ಲೆ, ಆಶೋಕ್ ಎಡಮಲೆ, ಡಿ.ಎಸ್. ಗಿರೀಶ್, ಗಣೇಶ್ ಭಟ್, ಸ್ನೇಹ ಶಿಕ್ಷಣ ಸಂಸ್ಥೆಯ ಡಾ. ಚಂದ್ರಶೇಖರ್ ದಾಮ್ಲೆ, ಪಿ.ಕೆ ಉಮೇಶ್, ಜಿ.ಜಿ. ನಾಯಕ್, ಕರುಣಾಕರ ಅಡ್ಪಂಗಾಯ, ಸೋಮನಾಥ ಪೂಜಾರಿ ಹರೀಶ್ ಬೂಡುಪನ್ನೆ, ಗುರುಸ್ವಾಮಿ, ಶಶಿಧರ್ ಶೆಟ್ಟಿ, ಲೋಕೇಶ್ ಕೆರೆಮೂಲೆ, ಗಣಪತಿ ಭಟ್ ಮಜಿಕೊಡಿ, ತಿಮ್ಮಪ್ಪ ನಾವೂರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News