ಕಾಸರಗೋಡು: ಹಲವೆಡೆ ಘರ್ಷಣೆ; ಶಾಸಕ ಇ. ಚಂದ್ರಶೇಖರನ್‌ಗೆ ಗಾಯ
ಕಾಸರಗೋಡು, ಮೇ 19: ಚುನಾವಣಾ ಫಲಿತಾಂಶದ ಬಳಿಕ ಜಿಲ್ಲೆಯ ಹಲವೆಡೆ ಹಿಂಸಾಚಾರ ನಡೆದಿದ್ದು , ಕಾಂಞಂಗಾಡ್ ಶಾಸಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಕಾಸರಗೋಡು, ಮಂಜೇಶ್ವರ, ಹೊಸದುರ್ಗ ತಾಲೂಕಿನಲ್ಲಿ ಏಳು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಿಂಸಾಚಾರದ ಬಳಿಕ ಕಾಸರಗೋಡಿನಲ್ಲಿ ಅಘೋಷಿತ ಬಂದ್ ಸ್ಥಿತಿ ನಿರ್ಮಾಣಗೊಂಡಿದ್ದು, ಬಸ್ಸು , ವಾಹನ ಸಂಚಾರ ಸ್ಥಗಿತಗೊಂಡಿದೆ. ದಿಢೀರನೆ ಉಂಟಾದ ಅಘೋಷಿತ ಬಂದ್‌ನಿಂದ ನಗರಕ್ಕೆ ಬಂದಿದ್ದ ಜನಸಾಮಾನ್ಯರು ಪರದಾಡುವಂತಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಮಾವುಂಗಾಲ್‌ನಲ್ಲಿ ಎಲ್‌ಡಿಎಫ್ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಚುನಾಯಿತ ಶಾಸಕ ಇ.ಚಂದ್ರಶೇಖರನ್ ಸೇರಿದಂತೆ ಇತರ ಮುಖಂಡರು ಗಾಯಗೊಂಡಿದ್ದಾರೆ. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಟಿ.ಕೆ. ರವಿ, ಕೆ.ವಿ. ಕೃಷ್ಣನ್ ಮೊದಲಾದವರು ಗಾಯಗೊಂಡರು. ತಂಡವೊಂದು ಮೆರವಣಿಗೆ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ಎಸೆಯಿತೆನ್ನಲಾಗಿದೆ.
ಕಾಸರಗೋಡು ವಿದ್ಯಾನಗರದಲ್ಲಿ ನಡೆದ ಘರ್ಷಣೆ ಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಯುಡಿಎಫ್‌ನ ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದೇ ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಬಳಸಿದರು.
ಹೊಸಬಸ್ಸು ನಿಲ್ದಾಣ ಮತ್ತು ಕರಂದಕ್ಕಾಡ್‌ನಲ್ಲಿ ಯುಡಿಎಫ್‌ನ ವಿಜಯೋತ್ಸವ ಮೆರವಣಿಗೆ ಮೇಲೆ ಗುಂಪೊಂದು ಕಲ್ಲುತೂರಾಟ ನಡೆಸಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆಯಿತು. ಕಲ್ಲುತೂರಾಟ ದಿಂದ ಇಬ್ಬರು ಪೊಲೀಸರು ಗಾಯಗೊಂಡರು.
ಹಿಂಸಾಚಾರದ ಹಿನ್ನಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೇಂದ್ರ ಪಡೆಯನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.