×
Ad

ಬಂಟ್ವಾಳ: ಬಂದ್ ಸಂಪೂರ್ಣ ಯಶಸ್ವಿ

Update: 2016-05-19 20:47 IST

ಬಂಟ್ವಾಳ, ಮೇ 19: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಕರೆ ನೀಡಿದ್ದ ಸ್ವಯಂ ಪ್ರೇರಿತ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಬಂಟ್ವಾಳ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ.

ತಾಲೂಕಿನ ಪ್ರಮುಖ ವ್ಯವಹಾರಿಕ ಕ್ಷೇತ್ರಗಳಾದ ಬಿ.ಸಿ.ರೋಡ್, ಪರಂಗಿಪೇಟೆ, ತುಂಬೆ, ಬಂಟ್ವಾಳ, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ವಾಮದಪದವು, ಮಾಣಿ, ಸಿದ್ದಕಟ್ಟೆ, ವಿಟ್ಲ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಗುರುವಾರ ಬೆಳಗ್ಗೆಯಿಂದಲೇ ಮಾಲಕರು ತಮ್ಮ ಅಂಗಡಿಮುಂಗಟ್ಟುಗಳ ಬಾಗಿಲು ತೆರೆಯದೆ ಬಂದ್ ಮಾಡುವ ಮೂಲಕ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧದ ತಮ್ಮ ವಿರೋಧದ ಬಿಸಿಯನ್ನು ಸರಕಾರಕ್ಕೆ ಮುಟ್ಟಿಸಿದ್ದಾರೆ. ಈ ಪ್ರದೇಶಗಳಲ್ಲಿ ಹಾಲು, ಔಷಧಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೊಟೇಲ್‌ಗಳು ಬಾಗಿಲು ತೆರೆದಿದ್ದರೂ ಗ್ರಾಹಕರಿಲ್ಲದೆ ಕೆಲಸಗಾರರು ಸುಮ್ಮನೆ ಕುಳಿತು ಕಾಲ ಕಳೆಯುತ್ತಿದ್ದರು.

ಬೆಳಗ್ಗೆಯಿಂದಲೇ ಸರಕಾರಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಜನಸಂಚಾರವೂ ಕಡಿಮೆಯಾಗಿತ್ತು. ಪ್ರತಿದಿನ ವಾಹನಗಳ ಹಾಗೂ ಜನರ ಭರಾಟೆಯಿಂದ ತುಂಬುತ್ತಿದ್ದ ಮೆಲ್ಕಾರ್, ಬಿ.ಸಿ.ರೋಡು, ಕಲ್ಲಡ್ಕ, ಪರಂಗಿಪೇಟೆ, ವಿಟ್ಲ ಪೇಟೆ ಪ್ರದೇಶಗಳು ಜನಸಂಚಾರವಿಲ್ಲದೆ ಖಾಲಿಖಾಲಿಯಾಗಿದ್ದವು. ಮಂಗಳೂರು- ಬಿ.ಸಿ.ರೋಡ್, ಬಿ.ಸಿ.ರೋಡ್- ಮಾಣಿ, ಬಿ.ಸಿ.ರೋಡ್- ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಕಲ್ಲಡ್ಕ- ವಿಟ್ಲ ರಸ್ತೆಯಲ್ಲಿ ಬೆಳಗ್ಗಿನ ಹೊತ್ತು ಕೆಲ ಖಾಸಗಿ ವಾಹನಗಳು ಸಂಚರಿಸುತ್ತಿತ್ತಾದರೂ ಮಧ್ಯಾಹ್ನದ ಬಳಿಕ ಅವುಗಳ ಸಂಖ್ಯೆಯೂ ಕಡಿಮೆಯಾಗಿ ಹೆದ್ದಾರಿಗಳು ಬಿಕೋ ಎನ್ನುತ್ತಿದ್ದವು. ಬಿ.ಸಿ.ರೋಡ್‌ನಲ್ಲಿ ಬೆರಳೆಣಿಕೆಯಷ್ಟು ಆಟೊಗಳು ಪಾರ್ಕ್‌ನಲ್ಲಿ ನಿಂತಿತ್ತಾದರೂ ಸಾರ್ವಜನಿಕರಿಲ್ಲದ ಕಾರಣ ಬಾಡಿಗೆ ಇಲ್ಲದೆ ಮಧ್ಯಾಹ್ನದವರೆಗೆ ಕಾಲ ಕಳೆದ ಆಟೊ ಚಾಲಕರು ಬಳಿಕ ಮನೆಗಳಿಗೆ ತೆರಳಿದರು.

ಬಿ.ಸಿ.ರೋಡ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬ್ಯಾಂಕ್‌ಗಳು, ಸರಕಾರಿ ಕಚೇರಿಗಳು ಬಾಗಿಲು ತೆರೆದಿತ್ತಾದರೂ ಸಾರ್ವಜನಿಕ ಕೆಲಸ ಕಾರ್ಯಗಳು ಸ್ಥಿಗಿತಗೊಂಡಿದ್ದವು. ಬಸ್ ಇಲ್ಲದಿದ್ದರಿಂದ ಸರಕಾರಿ ಕಚೇರಿ, ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಸಂಖ್ಯೆ ಕೂಡಾ ಕಡಿಮೆಯಾಗಿತ್ತು.

ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಬಳಿಕ ನೇತ್ರಾವತಿ ತಿರುವು ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ತೆರಳಿದರು. ಹಾಗೆಯೇ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಬಂಟ್ವಾಳ ಬೈಪಾಸ್‌ನ ಶ್ರೀ ಸಾಯಿ ಫ್ರೆಂಡ್ಸ್‌ನ ಸದಸ್ಯರು ವೌನ ಪ್ರತಿಭಟನೆ ನಡೆಸಿದರು. ಪುರಸಭಾ ಸದಸ್ಯ ಗಂಗಾಧರ್ ಪ್ರತಿಭಟನೆಗೆ ಸಾಥ್ ನೀಡಿದರು.

ಬಂದ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಗೆ ಹೆಚ್ಚುವರಿಯಾಗಿ 1 ಇನ್‌ಸ್ಪೆಕ್ಟರ್, 3 ಪಿಎಸ್ಸೈ, 50 ಕಾನ್ಸ್‌ಸ್ಟೇಬಲ್, 3 ಕೆಎಸ್‌ಆರ್‌ಪಿ, ಹಾಗೂ 1 ಡಿಆರ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಸ್ಸೈಗಳಾದ ನಂದಕುಮಾರ್, ಎ.ಕೆ.ರಕ್ಷಿತ್ ಗೌಡ ತಮ್ಮ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಗಸ್ತು ತಿರುಗುತ್ತಾ ಬಂದೋ ಬಸ್ತ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

’ಹೋರಾಟ ಮುಂದುವರಿಯಲಿದೆ’

ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕವಾಗಿರುವ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಜಿಲ್ಲೆಯ ಜನರು ಗುರುವಾರ ಸ್ವಯಂ ಪ್ರೇರಿತರಾಗಿ ಬಂದ್ ನಡೆಸುವ ಮೂಲಕ ಯೋಜನೆ ವಿರುದ್ಧದ ತಮ್ಮ ವಿರೋಧವನ್ನು ಸರಕಾರಕ್ಕೆ ಮುಟ್ಟಿಸಿದ್ದಾರೆ. ಯೋಜನೆಯನ್ನು ಸರಕಾರ ರದ್ದು ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಯಲಿದೆ. ಮುಂದಿನ ಎಲ್ಲ ರೀತಿಯ ಹೋರಾಟಕ್ಕೂ ಜಿಲ್ಲೆಯ ನಾಗರಿಕರು ಧುಮುಕುವ ಹಾಗೂ ಅವರಿಂದ ಬೆಂಬಲ ಸಿಗುವ ಭರವಸೆ ನಮಗಿದೆ. ಗುರುವಾರ ಸ್ವಯಂ ಪ್ರೇರಿತರಾಗಿ ಶಾಂತಿಯುತ ಬಂದ್ ನಡೆಸಿದ ಜಿಲ್ಲೆಯ ನಾಗರಿಕರಿಗೂ ಹಾಗೂ ಬಂದ್‌ಗೆ ಬೆಂಬಲ ನೀಡಿದ ಪ್ರತಿಯೊಂದು ಒಕ್ಕೂಟ, ಸಂಘ, ಸಂಸ್ಥೆಗಳಿಗೂ ಕೃತಜ್ಞತೆಗಳು.

-ಹರಿಕೃಷ್ಣ ಬಂಟ್ವಾಳ್, ಸಮಿತಿ ಮುಖಂಡ
- ಹನೀಫ್ ಖಾನ್ ಕೋಡಾಜೆ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News