ಭಟ್ಕಳ: ಪ್ರಾಂಶುಪಾಲ ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ
ಭಟ್ಕಳ, ಮೇ 20: ಸ್ಥಳೀಯ ಕಾಲೇಜೊಂದರ ಪ್ರಾಂಶುಪಾಲ ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದಿಂದಾಗಿ ಪ್ರಥಮ ಪಿ.ಯು.ಸಿ ಪೂರಕ ಪರೀಕ್ಷೆಯಿಂದ ವಂಚಿತಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ನಗರದ 6 ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಕತ್ತರಿ ಬಿದ್ದಂತಾಗಿದೆ.
ಘಟನೆಯ ವಿವರ: ಕರ್ನಾಕಟ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳು ಮೇ 19 ರಿಂದ 31 ರವರೆಗೆ ಬೆಳಗ್ಗೆ 9.00 ರಿಂದ ಮಧ್ಯಾಹ್ನ 12.15 ವರೆಗೆ ನಡೆಯಲಿವೆ ಎಂದು ಮಂಡಳಿಯು ಕಾಲೇಜುಗಳಿಗೆ ರವಾನಿಸಿದ ಪರೀಕ್ಷಾ ವೇಳಾ ಪಟ್ಟಿಯಲ್ಲಿ ತಿಳಿಸಲಾಗಿದ್ದು ಅದರಂತೆ ಶಿರಾಲಿ ಜನತಾ ವಿದ್ಯಾಲಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಉರ್ದು ವಿಷಯದಲ್ಲಿ ಬೆಳಗ್ಗೆ 9 ಗಂಟೆಯಿಂದ ಪರೀಕ್ಷೆ ಆರಂಭಗೊಂಡಿದ್ದು ಮಧ್ಯಾಹ್ನದ ವೇಳೆಗೆ ಪರೀಕ್ಷೆ ಪೂರ್ಣಗೊಂಡಿದೆ.
ಆದರೆ ಭಟ್ಕಳದ ಕಾಲೇಜೊಂದರ 6 ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಗೆ ಪರೀಕ್ಷೆಯನ್ನು ಬರೆಯಲು ಶಿರಾಲಿಯ ಜನತಾ ವಿದ್ಯಾಲಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತಲುಪಿದಾಗ ಅಲ್ಲಿ ಪರೀಕ್ಷೆಗಳು ನಡೆಯುವ ಯಾವುದೇ ಚಟುವಟಿಕೆ ಕಾಣದಿದ್ದಾಗ ಕಂಗಾಲಾಗಿದ್ದಾರೆ.
ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದ ವಿದ್ಯಾರ್ಥಿಗಳು ಪರೀಕ್ಷೆ ಬೆಳಗಿನ ಜಾವದಲ್ಲಿದ್ದು ಈಗ ಯಾವುದೇ ಪರೀಕ್ಷೆ ನಡೆಯುವುದಿಲ್ಲ ಎಂಬುದನ್ನು ತಿಳಿದು ಬೆಚ್ಚಿ ಬಿದ್ದಿದ್ದಾರೆ. ಕಾಲೇಜಿನಿಂದ ನೀಡಲಾದ ಅವರ ಹಾಲ್ ಟಿಕೇಟ್(ಪ್ರವೇಶಪತ್ರ) ದಲ್ಲಿ ಪರೀಕ್ಷೆಯ ಸಮಯವನ್ನು ಮಧ್ಯಹ್ನಾ 2.00 ಗಂಟೆಗೆ ಎಂದು ನಮೂದಿಸಲಾಗಿದೆ. ಕಾಲೇಜಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದಿಂದಾಗಿ 6 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚತರಾಗಬೇಕಾಗಿದೆ. ಇದಕ್ಕಾಗಿ ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿದರೆ ಅವರು ಸಂಪೂರ್ಣ ಜವಾಬ್ದಾರಿಯನ್ನು ಸಿಬ್ಬಂದಿ ಮೇಲೆ ಹಾಕಿ ಕೈ ತೊಳೆದುಕೊಂಡಿದ್ದಾರೆ. ಈಗ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಏನು ಎಂಬುದು ಒಂದು ಪ್ರಶ್ನೆಯಾಗಿ ಪರಿಣಮಿಸಿದೆ.
ಕಾಲೇಜಿನಲ್ಲಿ ಪ್ರಾಂಶುಪಾಲರು ರಜೆಯಲ್ಲಿದ್ದು ಉಪಪ್ರಾಂಶುಪಾಲ ಕೂಡ ಯಾರಿಗೂ ಹೇಳದೆ ಗೈರು ಹಾಜರಾಗಿದ್ದಾರೆಂದು ಗುಮಾಸ್ತರ ಕಣ್ಣು ತಪ್ಪಿನಿಂದಾಗಿ ಇಂತಹ ಪ್ರಮಾದ ನಡೆದು ಹೋಗಿದ್ದು ಇದಕ್ಕೆ ಹೊಣೆಗಾರರು ಯಾರು ಎನ್ನುವುದು ವಿದ್ಯಾರ್ಥಿ ಪಾಲಕರ ಪ್ರಶ್ನೆಯಾಗಿದೆ.
ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳಿಗಾದ ಗತಿ ಬೇರೆ ವಿದ್ಯಾರ್ಥಿಗಳಿಗೆ ಆಗ ಕೂಡದು ಎನ್ನುವ ದೃಷ್ಟಿಯಿಂದ ಪಿ.ಯು.ಪರೀಕ್ಷಾ ಮಂಡಳಿಗೆ ದೂರು ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.