ತೂಫಾನ್-ರಿಟ್ಜ್ ಢಿಕ್ಕಿ: 5 ಮಂದಿಗೆ ಗಂಭೀರ ಗಾಯ
ಕಡಬ, ಮೇ 20. ಐತ್ತೂರು ಸಮೀಪದ ಬಜಕೆರೆಯಲ್ಲಿ ತೂಪಾನ್ ಹಾಗೂ ರಿಟ್ಜ್ ಕಾರು ಮಧ್ಯೆ ಢಿಕ್ಕಿ ಸಂಭವಿಸಿ 10 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಕಾರು ಹಾಗೂ ತೂಫಾನ್ ಜಖಂಗೊಂಡಿದೆ.
ಗಾಯಗೊಂಡವರನ್ನು ಕಾರಿನಲ್ಲಿದ್ದ ಉಪ್ಪಿನಂಗಡಿ ಜೋಗಿಬೆಟ್ಟು ನಿವಾಸಿಗಳಾದ ಸಿದ್ದೀಕ್(31), ಸಲಾಂ(32) ಪುತ್ತುಮೋನ್ ಹಾಗೂ ತೂಫಾನ್‌ನಲ್ಲಿದ್ದ ಶಂಕರಪ್ಪ(65) ನೀಲವ್ವ(28) ಗಂಗಮ್ಮ(35), ಶಶಿಕಲಾ(22) ಜಗದೀಶ್(28),ಎಲ್ಲಮ್ಮ(45) ವಸಂತ(26) ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ ಮೂಲದ ಕುಟುಂಬವೊಂದು ತೂಪಾನ್‌ವಾಹನದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಯಾತ್ರೆ ಮುಗಿಸಿಕೊಂಡು ಸುಬ್ರಹ್ಮಣ್ಯ-ಕಡಬ ರಸ್ತೆಯಲ್ಲಿ ಹೊರನಾಡು ಮೂಲಕ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ, ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ರಿಟ್ಜ್ ಕಾರು ಬಜಕೆರೆ ತಿರುವಿನಲ್ಲಿ ಪರಸ್ಪರ ಢಿಕ್ಕಿ ಹೊಡೆಯಿತು. ಕಾರು ಹಾಗೂ ತೂಪಾನ್‌ನಲ್ಲಿದ್ದ ಒಟ್ಟು 10 ಮಂದಿಗೆ ಗಾಯಗಳಾಗಿದ್ದು ಇದರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಸ್ಥಳೀಯರು ಕಡಬ ಹಾಗೂ ಸುಬ್ರಹ್ಮಣ್ಯದ 108 ಆಂಬ್ಯುಲೆನ್ಸ್ ಮತ್ತು ರಿಕ್ಷಾ, ಜೀಪುಗಳಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ಗಳಲ್ಲಿ ಪುತ್ತೂರು ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.