ಶಾಲೆ ಬಿಟ್ಟು 8 ವರ್ಷದ ಬಳಿಕ ಎಸೆಸೆಲ್ಸಿ ಪಾಸಾದ ಯುವಕ
ಸುಳ್ಯ, ಮೇ 20: ಆತ ಕಲಿತದ್ದು 6ನೇ ತರಗತಿಯವರೆಗೆ ಮಾತ್ರ. ಸಣ್ಣ ಪ್ರಾಯದಲ್ಲೇ ಅಪ್ಪಮನೆ ಬಿಟ್ಟು ಹೋದ ಬಳಿಕ 6ನೆ ತರಗತಿಯಲ್ಲಿ ಓದು ನಿಲ್ಲಿಸಿದ ಆತ ಆರಿಸಿಕೊಂಡದ್ದು ಕಲ್ಲು ಹೊರುವ ಕೂಲಿ ಕೆಲಸ. ಆದರೆ 8 ವರ್ಷಗಳ ಬಳಿಕ ಕಲಿಕೆಯಲ್ಲಿ ಆಸಕ್ತಿ ತೋರಿದ ಆತ ಎಸೆಸೆಲ್ಸಿಯನ್ನು ಒಂದೇ ಪ್ರಯತ್ನದಲ್ಲಿ ಪಾಸ್ ಮಾಡಿದ್ದಾನೆ.
ಕಲ್ಮಡ್ಕ ನಿವಾಸಿ ಬಾಬು ಮತ್ತು ಲಕ್ಷ್ಮೀ ದಂಪತಿಯ ಪುತ್ರ ಈಶ್ವರ ಕಲ್ಮಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೆ ತರಗತಿ ಉತ್ತೀರ್ಣಗೊಂಡು 7ನೆ ತರಗತಿಗೆ ತೇರ್ಗಡೆ ಹೊಂದಿದ್ದ. ಆದರೆ ಕಾರ್ಮಿಕ ಕುಟುಂಬವಾದ ತನ್ನ ಮನೆಯಲ್ಲಿ ಎಳೆಯ ಪ್ರಾಯದಲ್ಲೇ ಅಪ್ಪ ಮನೆ ಬಿಟ್ಟು ಹೋದ ಕಾರಣ ಅಮ್ಮನ ಆರೈಕೆಯಲ್ಲಿ ಬೆಳೆದ ಈತ 7 ತರಗತಿಯಲ್ಲಿ ಶಾಲೆಯ ಆಸಕ್ತಿಯನ್ನು ಕಳೆದುಕೊಂಡು ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ.
8 ವರ್ಷದ ಬಳಿಕ ಮತ್ತೆ ಓದಿನಲ್ಲಿ ಆಸಕ್ತಿ ತೋರಿದ ಈಶ್ವರ ಕೂಲಿ ಮಾಡಿ ದುಡಿದ ಹಣದಲ್ಲೇ ಎಸೆಸೆಲ್ಸಿ ಪಾಸ್ ಮಾಡುವುದಕ್ಕಾಗಿ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಸೇರಿ ಖಾಸಗಿಯಾಗಿಯಾಗಿ ಪರೀಕ್ಷೆ ಬರೆಯಲು ತರಗತಿಗಳನ್ನು ಪಡೆದಿದ್ದ. ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಈತ ಪ್ರಥಮ ಪ್ರಯತ್ನದಲ್ಲೇ ತೃತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ದೇಶ ಸೇವೆ ಮಾಡುವಾಸೆ
ಸಣ್ಣ ಪ್ರಾಯದಲ್ಲೇ ಅಪ್ಪ ಮನೆ ಬಿಟ್ಟು ಹೋದ ಬಳಿಕ ಈಶ್ವರ ಮತ್ತು ಆತನ ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಾಸಿಸಲು ಸಣ್ಣ ಮನೆಯೊಂದನ್ನು ಬಿಟ್ಟರೆ ಇವರಿಗೆ ಬೇರಾವುದೇ ಆದಾಯದ ಮೂಲವಿಲ್ಲ. ಈಶ್ವರನ ತಮ್ಮನೂ 7ನೆ ತರಗತಿಯವರೆಗೆ ಓದಿದ್ದು ಮನೆಯಲ್ಲೇ ಇದ್ದಾನೆ. ಆದರೂ 8 ವರ್ಷದ ಬಳಿಕ ಓದಿನಲ್ಲಿ ಆಸಕ್ತಿ ತೋರಿದ ಈತ ಇನ್ನು ಪಿಯುಸಿ ಮಾಡಿ ಸೈನಿಕನಾಗುವ ಆಸಕ್ತಿ ಹೊಂದಿದ್ದಾನೆ. ಎಸೆಸೆಲ್ಸಿ ಪಾಸ್ ಮಾಡಿದ ಖುಷಿಯಲ್ಲಿರುವ ಈತನಿಗೆ ಪಿಯುಸಿ ವಿದ್ಯಾಭ್ಯಾಸ ಮಾಡುವ ಹಂಬಲವಿದ್ದರೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸಬೇಕಾದ್ದರಿಂದ ಅಗತ್ಯ ನೆರವಿನ ಸಹಕಾರವೂ ಬೇಕಿದೆ.