ಸುಳ್ಯ: ಮೇ 29ರಂದು ಸಾಧನಾ ಸಮಾವೇಶ
ಸುಳ್ಯ, ಮೇ 20: ಸುಳ್ಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಸಂಪಾಜೆ ವಲಯ ಮತ್ತು ಆಲೆಟ್ಟಿ ಬಿ ಒಕ್ಕೂಟದ ಆಶ್ರಯದಲ್ಲಿ ಸಂಪಾಜೆ ವಲಯ ಮಟ್ಟದ ಸಾಧನಾ ಸಮಾವೇಶ ಮತ್ತು ದಶಮಾನೋತ್ಸವದ ಸವಿನೆನಪಿಗಾಗಿ ಕಲ್ಲಪಳ್ಳಿಯ 32 ಕುಟುಂಬಗಳಿಗೆ ಕುಡಿಯುವ ನಳ್ಳಿ ನೀರಿನ ಕೊಡುಗೆಯ ಉದ್ಘಾಟನಾ ಸಮಾರಂಭವು ಮೇ 29ರಂದು ನಡೆಯಲಿದೆ.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
2004ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸುಳ್ಯ ತಾಲೂಕಿಗೆ ಬಂದ ನಂತರ ಈ ಭಾಗದ ಜನರ ಜೀವನಕ್ರಮ ಬದಲಾಗಿದೆ. ಸಾಕಷ್ಟು ಜನ ಶಿಕ್ಷಣ ಪಡೆದಿದ್ದಾರೆ. ಉದ್ಯೋಗ, ಕೃಷಿ, ಸೇರಿದಂತೆ ಯೋಜನೆಯ ಮೂಲಕ ಹಲವರು ಏಳಿಗೆಯನ್ನು ಪಡೆದಿದ್ದಾರೆ. ಆಲೆಟ್ಟಿ ಬಿ ಒಕ್ಕೂಟವು ಆರಂಭಗೊಂಡು ಇಂದು ದಶಮಾನೋತ್ಸವವನ್ನು ಆಚರಿಸುತ್ತಿದೆ. ಅದರ ನೆನಪಿಗಾಗಿ ಕಲ್ಲಪಳ್ಳಿಯ ಗುಡ್ಡಪ್ರದೇಶದಲ್ಲಿರುವ 32 ಕುಟುಂಬಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಇದರ ಉದ್ಘಾಟನೆ ನಡೆಯಲಿದೆ ಎಂದರು.
ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ನಳ್ಳಿ ನೀರಿನ ಉದ್ಘಾಟನೆಯನ್ನು ಮಾಡಲಿದ್ದಾರೆ. ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಾಧನಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಪಿ.ಬಿ.ದಿವಾಕರ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಆಂಗ್ಲೋ ಇಂಡಿಯನ್ ನಿಯೋಜಿತ ಲೋಕಸಬಾ ಸದಸ್ಯ ರಿಚರ್ಡ್, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎನ್.ಎ.ಜ್ಞಾನೇಶ್, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಂಚಡ್ಕ, ತಾಲ್ಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ ಕುಡೆಂಬಿ, ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಶಾಲೆಯ ವ್ಯವಸ್ಥಾಪಕಿ ವೇದಾವತಿ ಅನಂತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಯೋಜನಾಧಿಕಾರಿ ಯುವರಾಜ ಜೈನ್, ಸಂಪಾಜೆ ವಲಯ ಮೇಲ್ವಿಚಾರಕ ಪುಟ್ಟಣ್ಣ, ದಶಮಾನೋತ್ಸವ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಬಡ್ಡಡ್ಕ, ಆಲೆಟ್ಟಿ ಬಿ. ಒಕ್ಕೂಟದ ಅಧ್ಯಕ್ಷ ಯಶೋಧರ, ನೂತನ ಅಧ್ಯಕ್ಷ ರತ್ನಾಕರ ಪೆರುಮುಂಡ, ಶ್ರೀಲತಾ, ರಾಜೇಶ್, ಜಯಪ್ರಕಾಶ್ ಪೆರುಮುಂಡ, ಜನಜಾಗೃತಿ ವೇದಿಕೆಯ ಸದಸ್ಯ ಮಹೇಶ್ ರೈ ಮೇನಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.