×
Ad

ಹೆರಿಗೆ ಸಮಯದಲ್ಲಿ ಗರ್ಭಿಣಿಯರು ಮೃತಪಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ

Update: 2016-05-20 19:43 IST

ಮಂಗಳೂರು, ಮೇ 19: ಜಿಲ್ಲೆಯಲ್ಲಿ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪುವ ಪ್ರಕರಣಗಳು ಸಂಭವಿಸಿದರೆ, ಗರ್ಭಿಣಿ ಮಹಿಳೆಯರ ಆರೈಕೆಗೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಎಸಗುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದ್ದಾರೆ.

ದ.ಕ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗರ್ಭಿಣಿ ಮಹಿಳೆಯರ ಸಾವನ್ನಪ್ಪುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಹಿಳೆಯೊಬ್ಬಳು ಗರ್ಭವತಿ ಆದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗರ್ಭವತಿ ಮಹಿಳೆ ಸಮಯಕ್ಕೆ ಸರಿಯಾಗಿ ಔಷಧ, ವೈದ್ಯರ ತಪಾಸಣೆ, ಸ್ಕಾನಿಂಗ್ ಮಾಡುವ ಬಗ್ಗೆ ಮಾಹಿತಿ ನೀಡಿ ಅದನ್ನು ಕಡ್ಡಾಯವಾಗಿ ಮಾಡಿಸಬೇಕು. ಒಂದು ವೇಳೆ ಅದನ್ನು ಅವರು ನಿರಾಕರಿಸಿದರೆ ಅವರ ಮನೆಯವರ ಮೂಲಕ ಪತ್ರವನ್ನು ಪಡೆದುಕೊಳ್ಳಬೇಕು. ಪ್ರತಿಯೊಂದನ್ನು ದಾಖಲೀಕರಣ ಮಾಡಿಟ್ಟಿರಬೇಕು. ಮುಂದಿನ ದಿನಗಳಲ್ಲಿ ಯಾವುದೆ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಪ್ರಕರಣ ನಡೆದರೆ ಅವರ ದಾಖಲೆಯನ್ನು ನೋಡಿ ಅದರಲ್ಲಿ ಅಧಿಕಾರಿಗಳು ತಪ್ಪೆಸಗಿದ್ದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಸಹಾಯಕ ಆಯುಕ್ತ ರಾಜೇಂದ್ರ, ಗರ್ಭಿಣಿ ಮಹಿಳೆಯರು ಔಷಧಿಗಳನ್ನು, ಇಂಜೆಕ್ಷನ್‌ಗಳನ್ನು, ಸ್ಕಾನಿಂಗನ್ನು ಕ್ರಮಬದ್ಧವಾಗಿ ಮಾಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆಯನ್ನು ಸಂಬಂಧಪಟ್ಟವರು ಮಾಡುತ್ತಿರಬೇಕು. ಇದು ತಪ್ಪಿದರೆ ಅದನ್ನು ಹೆಚ್ಚಿನ ಅಪಾಯವಿರುವ ಪ್ರಕರಣವೆಂದು ಪರಿಗಣಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ , ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಿನ ಅಪಾಯವಿರುವ ಪ್ರಕರಣಗಳು ಕಂಡುಬಂದರೆ ಅವರನ್ನು ಆಸ್ಪತ್ರೆಗೆ ಸಿಬ್ಬಂದಿಯೇ ಕೊಂಡೊಯ್ಯಬೇಕು. ಈ ಮೂಲಕ ಗರ್ಭಿಣಿಯರ ಸಾವು ಪ್ರಕರಣವನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ದ.ಕ ಜಿ.ಪಂ. ಸಿಇಒ ಪಿ.ಐ.ಶ್ರೀವಿದ್ಯಾ, ವೆನ್‌ಲಾಕ್ ಆಸ್ಪತ್ರೆ ಸರ್ಜನ್ ರಾಜೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News