×
Ad

ಆರ್‌ಟಿಇ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 791 ಮಂದಿಗೆ ಸೀಟು ಖಾತರಿ

Update: 2016-05-20 19:52 IST

ಮಂಗಳೂರು, ಮೇ 20: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 791 ಮಂದಿಗೆ ಸೀಟು ಖಾತರಿಗೊಂಡಿದೆ. ಇನ್ನುಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು ಎರಡನೆ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.

ದ.ಕ ಜಿಲ್ಲಾಕಾರಿ ಕಚೇರಿಯಲ್ಲಿಂದು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ದಾಖಲೆಗೆ ಸಂಬಂಧಪಟ್ಟಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ ಜಿಲ್ಲೆಯಲ್ಲಿ ಒಟ್ಟು 2,274 ಸೀಟುಗಳಿದ್ದು, 3,398 ಮಂದಿ ಅರ್ಜಿ ಹಾಕಿದ್ದಾರೆ. ಇದರಲ್ಲಿ 1,864 ಅರ್ಜಿ ಅಂತಿಮಗೊಂಡಿದೆ. ಬಾಕಿ ಅರ್ಜಿಗಳ ಪರೀಶೀಲನೆಯನ್ನು ನಡೆಸಿದ ನಂತರ ಸೀಟು ಖಾತರಿಗೊಳಿಸಲಾಗುವುದು ಎಂದು ಹೇಳಿದರು.

ಆರ್‌ಟಿಇ ಕಾಯ್ದೆ ಇತ್ತೀಚಿನ ವರ್ಷಗಳಲ್ಲಿ ಜಾರಿಯಾಗಿರುವುದರಿಂದ ಕೆಲವೊಂದು ನ್ಯೂನತೆಗಳಿವೆ. ಅದನ್ನು ಹಂತ ಹಂತವಾಗಿ ಸರಕಾರ ಮುಂದಿನ ದಿನಗಳಲ್ಲಿ ಸರಿಪಡಿಸಲಿದೆ. ಸರಕಾರದ ಸವಲತ್ತು ಅರ್ಹರಿಗೆ ತಲುಪಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವಾಗಬೇಕಾಗಿದೆ ಎಂದರು. ಡಿಡಿಪಿಐ ವಾಲ್ಟರ್ ಡಿಮೆಲ್ಲೊ ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ನಡಿ ಸಲ್ಲಿಕೆಯಾದ ಅರ್ಜಿಗಳಲ್ಲಿ ವಾರ್ಡ್, ಗ್ರಾಮ, ವ್ಯಾಪ್ತಿ, ಜಾತಿ ಸೇರಿದಂತೆ ಪ್ರತಿಯೊಂದು ಮಾಹಿತಿ ಸರಿಯಾಗಿ ನಮೂದಾಗಿರುವುದನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ತಪ್ಪು ಮಾಹಿತಿಗಳಿರುವ ಅರ್ಜಿಗಳನ್ನು ಪರಿಶೀಲನೆ ವೇಳೆ ತಡೆಹಿಡಿಯಲಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ಉಮರ್ ಮಾತನಾಡಿ, ಅಲ್ಪಸಂಖ್ಯಾತ ವಿನಾಯಿತಿಯಡಿ ಇರುವ ಕೆಲವು ಉನ್ನತ ಸಂಸ್ಥೆಗಳಿಗೆ ಆರ್‌ಟಿಇ ಕಾಯ್ದೆ ಇಲ್ಲದೆ ಇರುವುದರಿಂದ ಅಲ್ಲಿ ಆರ್‌ಟಿಇ ಅನ್ವಯವಾಗುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭ ಪಿ.ವಿ.ಮೋಹನ್ ಮಾತನಾಡಿ, ತಾಂತ್ರಿಕ ಕಾರಣಗಳಿಂದಾಗಿ ಬಡಮಕ್ಕಳಿಗೆ ಕೊಡುವ ಸೀಟನ್ನು ಕಸಿಯಬೇಡಿ. ಅರ್ಹ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ ಎಂದು ಹೇಳಿದರು.

ವಕೀಲ ದಿನೇಶ್ ಉಳೇಪಾಡಿ ಮಾತನಾಡಿ, ಕಾಯ್ದೆಗಳಿಗೆ ಅನುಗುಣವಾಗಿ ಸರಕಾರದಿಂದ ಸುತ್ತೋಲೆಗಳು ಬಂದಾಗ ಆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗಬೇಕು ಎಂದರು.

ಸಭೆಯಲ್ಲಿ ದ.ಕ ಜಿ.ಪಂ. ಸಿಇಒ ಪಿ.ಐ. ಶ್ರೀವಿದ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News