ಮುಂದಿನ 6 ತಿಂಗಳೊಳಗೆ ವಕ್ಫ್ ಆಸ್ತಿ ಸರ್ವೇ ಕಾರ್ಯ ಪೂರ್ಣ: ಸಚಿವ ಖಮರುಲ್ ಇಸ್ಲಾಂ
ಮಂಗಳೂರು, ಮೇ 20: ಮುಂದಿನ 6 ತಿಂಗಳೊಳಗೆ ರಾಜ್ಯದಲ್ಲಿನ ವಕ್ಫ್ ಆಸ್ತಿಯ ಸರ್ವೇ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್‌ಖಾತೆ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳ ಸರ್ವೇ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದರು. ರಾಜ್ಯದಲ್ಲಿ 34 ಸಾವಿರ ಎಕರೆ ಜಾಗ ವಕ್ಫ್ ವಶದಲ್ಲಿದೆ. ಶೀಘ್ರ ಸರ್ವೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಮಂಗಳೂರು ಹಾಗೂ ಗುಲ್ಬರ್ಗಾ ಜಿಲ್ಲೆಯಲ್ಲಿ 74.60 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಹಜ್ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಾಣ ಸಮಿತಿ ಇದರ ನೇತೃತ್ವ ವಹಿಸಲಿದ್ದು, ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಅಧಿಕಾರ ನೀಡಲಾಗಿದೆ ಎಂದವರು ಹೇಳಿದರು.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಆಝಾದ್ ಭವನ
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮೌಲಾನಾ ಅಝಾದ್ ಭವನ ನಿರ್ಮಾಣದ ಚಾಲನೆಗಳು ಅಂತಿಮ ಹಂತದಲ್ಲಿವೆ. ಈ ಕೇಂದ್ರದಲ್ಲಿ ಮಾಹಿತಿ ಕೇಂದ್ರ, ವಕ್ಫ್ ಸಹಿತ ವಿವಿಧ ಕಚೇರಿಗಳು ಒಂದೇ ಸೂರಿನಲ್ಲಿ ಕಾರ್ಯಾಚರಿಸಲಿದೆ. ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿ ಮೌಲಾನಾ ಅಝಾದ್ ಭವನ ನಿರ್ಮಾಣಗೊಳ್ಳಲಿದೆ ಹಾಗೂ ಬಜ್ಪೆ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಬಳಿ ಹಜ್ ಭವನ ನಿರ್ಮಾಣವಾಗಲಿದೆ ಎಂದು ಸಚಿವ ಖಮರುಲ್ ಇಸ್ಲಾಂ ವಿವರಿಸಿದರು.
ಚುನಾವಣಾ ಪ್ರಣಾಳಿಕೆಯಂತೆ ಅಲ್ಪಸಂಖ್ಯಾತರಿಗಾಗಿ ನೀಡಿದ 10 ಭರವಸೆಗಳಲ್ಲಿ ಈಗಾಗಲೇ 8 ಭರವಸೆಗಳನ್ನು ಪೂರೈಸಿದೆ. ಕೇಂದ್ರದ ಯುಪಿಎ ಸರಕಾರ ಅಲ್ಪಸಂಖ್ಯಾತರಿಗೆ ತಂದಿದ್ದ ಯೋಜನೆಗಳನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲಾಗಿದೆ. ಈ ಹಿಂದಿನ ರಾಜ್ಯ ಸರಕಾರ 5 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆಂದು 1,145 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೇವಲ 3 ವರ್ಷಗಳಲ್ಲಿ ಒಟ್ಟು 2,528 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿದೆ ಎಂದರು.
ಉಳ್ಳಾಲ ದರ್ಗಾ ಗೊಂದಲ: ಡಿಸಿಯೊಂದಿಗೆ ಚರ್ಚೆ
ಉಳ್ಳಾಲ ದರ್ಗಾ ಅಧ್ಯಕ್ಷರ ನೇಮಕ ಗೊಂದಲಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ದರ್ಗಾ ಅಧ್ಯಕ್ಷರ ಆಯ್ಕೆ ವಿವಾದಕ್ಕೆ ಸಂಬಂಧಿಸಿ ದ.ಕ. ಜಿಲ್ಲಾಡಳಿತದಿಂದ ಪತ್ರ ಬರೆಯಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.