×
Ad

ಉತ್ತರಾಖಂಡ:ದಲಿತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಿಜೆಪಿ ಸಂಸದ ತರುಣ ವಿಜಯ್ ಮೇಲೆ ಹಲ್ಲೆ

Update: 2016-05-20 21:14 IST

ಡೆಹ್ರಾಡೂನ್,ಮೇ 20: ರಾಜ್ಯದ ಚಕ್ರತಾ ಪ್ರದೇಶದಲ್ಲಿ ಹಿಂದುಳಿದ ಜಾತಿಗಳ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿರುವ ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ ವಿಜಯ್ ಮತ್ತು ಕೆಲವು ದಲಿತ ನಾಯಕರ ಮೇಲೆ ಶುಕ್ರವಾರ ಮಧ್ಯಾಹ್ನ ಸವರ್ಣೀಯ ಗ್ರಾಮಸ್ಥರ ಗುಂಪೊಂದು ಹಲ್ಲೆ ನಡೆಸಿ ಗಾಯಗೊಳಿಸಿದೆ.

ರಾಜಧಾನಿ ಡೆಹ್ರಾಡೂನಿನಿಂದ 180 ಕಿ.ಮೀ.ದೂರದ ಕುಗ್ರಾಮ ಪುನ್ಹಾದಲ್ಲಿನ ಸಿಲ್ಗುರ್ ದೇವತಾ ದೇವಳದಿಂದ ಹೊರಬರುತ್ತಿದ್ದ ವಿಜಯ್,ಸ್ಥಳೀಯ ದಲಿತ ನಾಯಕ ದೌಲತ್ ಕುಂವರ್ ಮತ್ತು ಇತರ ದಲಿತರ ಮೇಲೆ ಸವರ್ಣೀಯರು ಕಲ್ಲುಗಳನ್ನು ತೂರಿದರು.

ಆಸುಪಾಸಿನ ಪ್ರದೇಶಗಳ ಮೇಲ್ಜಾತಿಗಳ ಜನರು ‘ಭಂಡಾರ’ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ದಲಿತರ ಗುಂಪು ದೇವಳದಿಂದ ಹೊರಬರುತ್ತಿರುವುದನ್ನು ಕಂಡು ಕೆರಳಿದ ಸವರ್ಣೀಯರು ಅವರತ್ತ ಕಲ್ಲುಗಳನ್ನು ತೂರಿದ್ದು, ಎಲ್ಲರೂ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು ಸಂಸದರ ಕಾರನ್ನು ಜಖಂಗೊಳಿಸಿ ರಸ್ತೆ ಪಕ್ಕದ ಹೊಂಡಕ್ಕೆ ಉರುಳಿಸಿದ್ದು,ಅವರನ್ನು ಸಮೀಪದ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಉತ್ತರಾಖಂಡದ ಜೌನ್ಸಾರ್ ಭಾಬರ್ ಪ್ರದೇಶದಲ್ಲಿಯ 349 ದೇವಸ್ಥಾನಗಳಲ್ಲಿ ಶತಮಾನಗಳಿಂದಲೂ ದಲಿತರ ಪ್ರವೇಶ ಮತ್ತು ಅವರು ಪೂಜಿಸುವುದನ್ನು ನಿಷೇಧಿಸಲಾಗಿದೆ. ಈ ಅನಾಗರಿಕ ಸಂಪ್ರದಾಯದ ವಿರುದ್ಧ ರಾಜ್ಯದಲ್ಲಿಯ ದಲಿತ ಸಮುದಾಯವು ಹಮ್ಮಿಕೊಂಡಿರುವ ಪ್ರತಿಭಟನೆಯ ಮೊದಲ ಹೆಜ್ಜೆಯಾಗಿ ಸಿಲ್ಗುರ್ ದೇವತಾ ದೇವಸ್ಥಾನ ಪ್ರವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ತಾವು ದೇವಸ್ಥಾನಗಳನ್ನು....ವಿಶೇಷವಾಗಿ ಚಕ್ರತಾ ಪ್ರದೇಶದಲ್ಲಿನ ಐದು ದೇವಸ್ಥಾನಗಳನ್ನು ಬಲವಂತದಿಂದ ಪ್ರವೇಶಿಸುವುದಾಗಿ ದಲಿತ ನಾಯಕರು ಹೇಳಿದರು. ಮುಂದಿನ ವರ್ಷದಿಂದ ರಾಜ್ಯಸಭೆಯಿಂದ ನಿವೃತ್ತರಾಗಲಿರುವ ತರುಣ ವಿಜಯ್ ದಲಿತರ ಈ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ.

ಹಿಂದುಗಳ ಪ್ರಮುಖ ಯಾತ್ರಾಸ್ಥಳಗಳನ್ನು ಹೊಂದಿರುವ ಉತ್ತರಾಖಂಡದಲ್ಲಿ ಸಾವಿರಾರು ದೇವಸ್ಥಾನಗಳಿದ್ದು,ಈ ಪೈಕಿ ಹೆಚ್ಚಿನವುಗಳಲ್ಲಿ ಹಿಂದುಳಿದ ಜಾತಿಗಳ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ದೇವಸ್ಥಾನ ಪ್ರವೇಶ ಅಭಿಯಾನಕ್ಕೆ ಪ್ರತೀಕಾರವಾಗಿ ಮೇಲ್ಜಾತಿಗಳ ಜನರು ತಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯನ್ನು ಹಲವಾರು ದಲಿತ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಹೈದ್ರಾಬಾದ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ರೋಹಿತ ವೇಮುಲ ಆತ್ಮಹತ್ಯೆಯ ಬಳಿಕ ಜಾತಿಯಾಧಾರಿತ ತಾರತಮ್ಯದ ಕುರಿತು ರಾಷ್ಟ್ರವ್ಯಾಪಿ ನಡೆಯುತ್ತಿರುವ ಚರ್ಚೆಯ ನಡುವೆಯೇ ಇಂದಿನ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News