×
Ad

ಪೈಪ್‌ಲೈನ್‌ ನಿರ್ವಾಹಕನಿಂದ ನೀಗಿತು ಊರಿನ ನೀರಿನ ಸಮಸ್ಯೆ

Update: 2016-05-20 21:58 IST

ಉಳ್ಳಾಲ, ಮೇ 20: ತಲಪಾಡಿ ಗ್ರಾಮದ ಗಡಿ ಪ್ರದೇಶ ತಚ್ಚಣಿಯಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಹಲವಾರು ಜನರು ಸಂಕಷ್ಟ ಎದುರಿಸುವಂತಾಗಿತ್ತು. ಈ ಸಮಸ್ಯೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಸಕರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸ್ಥಳೀಯ ನೀರಿನ ಪೈಪ್‌ಲೈನ್ ನಿರ್ವಾಹಕರೊಬ್ಬರು ಸ್ವತಃ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರನ್ನು ಸಂಪರ್ಕಿಸಿ ಊರಿಗೆ ಕೊಳವೆ ಬಾವಿ ಹಾಕಿಸಿ ಊರಿನವರಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಭೇಷ್ ಎಂದೆನಿಸಿಕೊಂಡಿದ್ದಾರೆ.

ತಲಪಾಡಿ ತಚ್ಚಣಿ ಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಅದರಲ್ಲೂ ಈ ಬಾರಿಯಂತೂ ಜಲಕ್ಷಾಮ ಅಧಿಕವಾಗಿತ್ತು. ಇದರಿಂದಾಗಿ ಈ ಭಾಗದ ಜನರು ಕುಡಿಯುವ ನೀರಿಗಾಗಿ ಬಹಳಷ್ಟು ತೊಂದರೆಯನ್ನು ಎದುರಿಸಿದ್ದರು. ಕಳೆದ ಎರಡು ತಿಂಗಳುಗಳಿಂದ ಪಂಚಾಯತ್‌ನಿಂದಲೂ ಸರಿಯಾಗಿ ನೀರು ಸರಬರಾಜಾಗುತ್ತಿರಲಿಲ್ಲ.

ಊರಿನ ಜನರ ನೀರಿನ ಗೋಳನ್ನು ಹತ್ತಿರದಿಂದ ಕಂಡಿದ್ದ ಸ್ಥಳೀಯ ಪೈಪ್‌ಲೈನ್ ನಿರ್ವಾಹಕ ರಾಮಣ್ಣ, ತಲಪಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ಸಿದ್ಧೀಕ್ ಕೊಳಂಗೆರೆಯಲ್ಲಿ ನೀರಿನ ಸಮಸ್ಯೆಯ ಗಂಭೀರತೆ ಬಗೆಗೆ ವಿವರಿಸಿದ್ದು ತಕ್ಷಣ ಸ್ಪಂದಿಸಿದ ಸಿದ್ಧೀಕ್, ಸಚಿವ ಯು.ಟಿ ಖಾದರ್ ಜೊತೆ ಚರ್ಚಿಸಿ ತಾಲೂಕು ಪಂಚಾಯತ್ ಹಾಗೂ ಕೊಣಾಜೆ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಬಾನು ಅವರ ಅನುದಾನದಲ್ಲಿ ತಚ್ಚಣಿ ಪ್ರದೇಶಕ್ಕೆ ಗುರುವಾರದಂದು ನೂತನ ಕೊಳವೆ ಬಾವಿಯನ್ನು ಕೊರೆಸಿದ್ದಾರೆ. ಕೊಳವೆ ಬಾವಿಯಲ್ಲಿ ಉತ್ತಮ ಪ್ರಮಾಣದ ನೀರು ದೊರಕಿದ್ದು ಸ್ಥಳೀಯರಲ್ಲಿ ಸಂತಸವನ್ನುಂಟು ಮಾಡಿದೆ.

ಗ್ರಾಮಸ್ಥರಿಗೆ ಪಂಚಾಯತ್‌ನಿಂದ ಸಂಭಾವನೆ ಪಡೆದು ನೀರು ಪೂರೈಸುವ ಪೈಪ್‌ಲೈನ್ ನಿರ್ವಾಹಕ ಕಾಯಕ ನಡೆಸುತ್ತಿರುವ ರಾಮಣ್ಣನಂತಹ ಸಾಮಾನ್ಯ ವ್ಯಕ್ತಿಯೊಬ್ಬರು ಜನಪರ ಕೆಲಸ ಮಾಡಿರುವುದು ಊರವರ ಮೆಚ್ಚುಗೆಗೆ ಪಾತ್ರವಾಗಿದೆ.

ತಚ್ಚಾಣಿಯ ಸ್ಥಳೀಯ ಮೂರು ಗ್ರಾ.ಪಂ ಸದಸ್ಯರಲ್ಲಿ ಎರಡು ತಿಂಗಳುಗಳಿಂದ ಕಾಡುತ್ತಿರುವ ನೀರಿನ ಸಮಸ್ಯೆ ಬಗೆಗೆ ತಿಳಿಸಿದ್ದು ಅವರಿಂದ ಉಡಾಫೆ ಉತ್ತರಗಳೇ ಸಿಕ್ಕಿದ್ದು, ರೋಸಿ ಹೋಗಿ ತಾನೇ ಖುದ್ದಾಗಿ ತಾ.ಪಂ ಸದಸ್ಯರಲ್ಲಿ ಸಮಸ್ಯೆ ಮನವರಿಸಿದ್ದು, ಸಿದ್ಧೀಕ್ ಮತ್ತು ಸಚಿವ ಖಾದರ್ ಅವರು ತಕ್ಷಣ ಸ್ಪಂದಿಸಿ ಊರವರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದು ಸಂತಸ ತಂದಿದೆ.

ರಾಮಣ್ಣ, ಪೈಪ್‌ಲೈನ್ ನಿರ್ವಾಹಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News