ಅಮೃತಪ್ರಕಾಶನದ ವಿಶೇಷ ಸಂಚಿಕೆ ಬಿಡುಗಡೆ
ಮಂಗಳೂರು, ಮೇ 20: ಅಮೃತ ಪ್ರಕಾಶನ ಕನ್ನಡ ಮಾಸಿಕ ಪತ್ರಿಕೆಯ ಎರಡನೆ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಇಂದು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಪತ್ರಿಕೆಗಳನ್ನು ನಡೆಸುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಪತ್ರಿಕೆ ಸಂಪಾದಕರು ಸಾಹಿತ್ಯಕಲೆಗಳಲ್ಲಿ ತೊಡಗಿಕೊಂಡು ಪತ್ರಿಕೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸದಾಶಯ ಪತ್ರಿಕೆಯ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಪತ್ರಿಕೆ ಒಂದು ವರ್ಗದವರಿಗೆ ಸೀಮಿತಗೊಳ್ಳದೇ ಸಮಾಜದ ಎಲ್ಲಾ ವರ್ಗದವರ ಆಶಯದಂತೆ ನಡೆಯುತ್ತಿದೆ. ಪತ್ರಿಕೆಯ ಏಳಿಗೆಗೆ ಸಮಾಜದ ಎಲ್ಲಾ ವರ್ಗದವರ ಪ್ರೋತ್ಸಾಹ ಅಗತ್ಯವೆಂದು ನುಡಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಾಯ ಭಟ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಮೇರುಮಜಲು ಮಾತಾ ಲಕ್ಷಣಿ ವೃದ್ಧಾಶ್ರಮದ ಸಂಸ್ಥಾಪಕ ಹರೀಶ್ ಪೆರ್ಗಡೆ, ಕಾಸರಗೋಡು ಅಶೋಕ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.