×
Ad

ನಿರ್ಮಿತಿ ಕೇಂದ್ರದಿಂದ ಈ ವರ್ಷ 107 ಕಾಮಗಾರಿ: ಜಿಲ್ಲಾಧಿಕಾರಿ

Update: 2016-05-20 23:56 IST

ಉಡುಪಿ, ಮೇ 20: ಉಡುಪಿ ನಿರ್ಮಿತಿ ಕೇಂದ್ರವು 2015-16ನೆ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳ 410 ಕಾಮಗಾರಿಗಳನ್ನು 36.16ಕೋಟಿ ರೂ. ವೆಚ್ಚದಲ್ಲಿ ನಡೆಸಿದ್ದು, 2016-17ನೆ ಸಾಲಿನಲ್ಲಿ 107 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಕೇಂದ್ರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದ್ದಾರೆ.

1988ರಲ್ಲಿ ಕೇಂದ್ರ ಸರಕಾರದ ನಿರ್ಣಯದಂತೆ ರಾಜ್ಯ ಸರಕಾರವು ಕೇಂದ್ರ ಸರಕಾರದ ನೆರವಿನೊಂದಿಗೆ ಪ್ರತಿಯೊಂದು ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರ ಗಳನ್ನು ಸ್ಥಾಪಿಸಿದ್ದು, ಅದರಂತೆ 2004ರಲ್ಲಿ ಉಡುಪಿ ಜಿಲ್ಲೆಯಲ್ಲಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಕೆಎಸ್‌ಆರ್ ಕಾಯ್ದೆ 1960 ಅಡಿಯಲ್ಲಿ ನೋಂದಾಯಿತವಾಗಿದೆ ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿರ್ಮಿತಿ ಕೇಂದ್ರವು ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಟ್ಟಡ, ಗ್ರಂಥಾಲಯ, ಸಮುದಾಯ ಭವನ, ವಸತಿ ನಿಲಯ, ಪೊಲೀಸ್ ಠಾಣಾ ಕಟ್ಟಡ, ಕಾಂಕ್ರಿಟ್ ರಸ್ತೆ, ತೂಗು ಸೇತುವೆ, ಕಾಲು ಸಂಕ, ಬೀಚ್ ಅಭಿವೃದ್ಧಿ, ಸೋಲಾರ್ ಘಟಕಗಳ ಅಳವಡಿಕೆ, ಉದ್ಯಾನವನ ಅಭಿವೃದ್ಧಿ, ಕೆರೆಗಳ ಸಂರ ಕ್ಷಣಾ ಕಾಮಗಾರಿಗಳನ್ನು ನಡೆಸಿವೆ. ಅದೇ ರೀತಿ ಕೊಲ್ಲೂರು ದೇವಳ ಮತ್ತು ಉಡುಪಿಯ ಅನಂತೇಶ್ವರ ಹಾಗೂ ಚಂದ್ರವೌಳೇಶ್ವರ ದೇವಳದ ಕಾಮಗಾರಿ ಯನ್ನೂ ನಡೆಸಿದೆ ಎಂದು ಹೇಳಿದರು.

ಕೇಂದ್ರ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ನಿಟ್ಟೆ, ಮೂಡ್ಲು ಕಟ್ಟೆ, ಬಂಟಕಲ್ಲು, ಮಂಗಳೂರಿನ ಪಿ.ಎ. ಇಂಜಿನಿಯರ್ ಕಾಲೇಜುಗಳನ್ನು ನೇಮಕ ಮಾಡಲಾಗಿದ್ದು, ಇವರು ಪ್ರತೀ ಹಂತ ಹಂತದಲ್ಲಿ ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡುತ್ತಾರೆ. ಆ ಬಳಿಕವಷ್ಟೆ ಕಾಮಗಾರಿ ಬಿಲ್‌ನ್ನು ಪಾವತಿಸಲಾಗುತ್ತದೆ ಎಂದರು.

ಕೇಂದ್ರದ 2014-15ನೆ ಸಾಲಿನ ಕಾಮಗಾರಿಗಳಿಂದ ಬಂದ ನಿವ್ವಳ ಲಾಭದಿಂದ ಚೈತನ್ಯ ಚಾರಿಟೇಬಲ್ ಟ್ರಸ್ಟ್‌ನ ಸ್ಪಂದನ ಬುದ್ಧಿಮಾಂದ್ಯ ವಿಶೇಷ ಮಕ್ಕಳ ಶಾಲೆಯ ಉಪ್ಪೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡಕ್ಕೆ 10 ಲಕ್ಷ ರೂ. ನೀಡಲಾಗಿದೆ. 2015-16ನೆ ಸಾಲಿನ ಲಾಭದಿಂದ ದೈಹಿಕ ಹಾಗೂ ಮಾನಸಿಕ ಅಶಕ್ತರಿಗೆ ಕೆಲಸ ಮಾಡುವ ಸಂಸ್ಥೆಯ ಕಟ್ಟಡಕ್ಕೆ 10 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News