ಮೇ 24: ಮಡಿಕೇರಿಯಲ್ಲಿ ಪಂಚಭಾಷಾ ಅಕಾಡಮಿಗಳ ಸಾಂಸ್ಕೃತಿಕ ಸಮ್ಮಿಲನ

Update: 2016-05-20 18:40 GMT

ಮಂಗಳೂರು, ಮೇ 20: ಕೊಡವ ಸಾಹಿತ್ಯ ಅಕಾಡಮಿಯ ನೇತೃತ್ವದಲ್ಲಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ, ಬ್ಯಾರಿ ಸಾಹಿತ್ಯ ಅಕಾಡಮಿ, ತುಳು ಸಾಹಿತ್ಯ ಅಕಾಡಮಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿಗಳ ಸಹಯೋಗದೊಂದಿಗೆ ಪಂಚಭಾಷಾ ಅಕಾಡಮಿಗಳ ‘ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ’ ಸೌಹಾರ್ದ ಸಮಾವೇಶವು ಮೇ 24ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪಸರ್ಕಲ್ ಬಳಿಯ ಕ್ರಿಸ್ಟಲ್‌ಕೋರ್ಟ್ ಸಭಾಂಗಣ ದಲ್ಲಿ ನಡೆಯಲಿದೆ.
ಸಮಾವೇಶಕ್ಕೆ ಪೂರ್ವಭಾವಿಯಾಗಿ ಅಂದು ಬೆಳಗ್ಗೆ 10ಕ್ಕೆ ಮಡಿಕೇರಿ ಗಾಂಧಿ ಮೈದಾನದಿಂದ ಸಾಂಸ್ಕೃತಿಕ ಮೆರವಣಿಗೆ ಹೊರಡಲಿದ್ದು, ಕೊಡಗು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಚಾಲನೆ ನೀಡುವರು. ಪೂರ್ವಾಹ್ನ 11ಕ್ಕೆ ಸಭಾ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಉದ್ಘಾಟಿಸುವರು. ಮಧ್ಯಾಹ್ನ 12:30ರಿಂದ ವಿಚಾರಗೋಷ್ಠಿ ನಡೆಯಲಿದ್ದು, ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ‘ಬ್ಯಾರಿ ಭಾಷೆ ಮತ್ತು ಸಂಸ್ಕೃತಿ’ ಎಂಬ ವಿಷಯದಲ್ಲಿ ಅಕಾಡಮಿಯ ಮಾಜಿ ಸದಸ್ಯ ಬಿ.ಎ.ಶಂಸುದ್ದೀನ್ ಮಡಿಕೇರಿ ವಿಷಯ ಮಂಡಿಸುವರು. ಅಪರಾಹ್ನ 2:30ಕ್ಕೆ 5 ಭಾಷೆಗಳಲ್ಲಿ ಕವಿಗೋಷ್ಠಿ ನಡೆಯಲಿದ್ದು, ಬ್ಯಾರಿ ಅಕಾಡಮಿಯ ವತಿಯಿಂದ ಎಂ.ಅಬ್ದುಲ್ಲಾ ಮಡಿಕೇರಿ ಭಾಗವಹಿಸುವರು. ಸಂಜೆ 4ಕ್ಕೆ ನಡೆಯುವ ಪಂಚಭಾಷಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಬ್ದುರ್ರಹ್ಮಾನ್ ಕುತ್ತೆತ್ತೂರು ಬರೆದು ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ ಬ್ಯಾರಿ ಕವನ ಸಂಕಲನ ‘ಜೀಯಸೆಲೆ’ ಲೋಕಾರ್ಪಣೆಗೊಳ್ಳಲಿದೆ.
ಸಂಜೆ 5:30ರಿಂದ ನಡೆಯುವ ಸಾಂಸ್ಕೃತಿಕ ವೈವಿಧ್ಯದಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ದಫ್, ಶರೀಫ್ ಬೆಳ್ಳಾರೆ ಹಾಗೂ ಇಬ್ರಾಹೀಂ ಕಡಂಬು ನೇತೃತ್ವದಲ್ಲಿ ಬ್ಯಾರಿ ಜನಪದ ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News