ಕಲಾಭವನ್ ಮಣಿ ಹೆಸರಿನಲ್ಲಿ ಅವರ ಸಾವಿನ ನಂತರವೂ ಹಣ ಮಾಡುತ್ತಿದ್ದಾರೆ: ಸಹೋದರ ರಾಮಕೃಷ್ಣನ್ ಆರೋಪ
ಕೊಚ್ಚಿ, ಮೇ 21: ಕಲಾಭವನ್ ಮಣಿ ಮರಣದಲ್ಲಿ ನಿಗೂಢತೆಯಿದೆ ಎಂದು ಆರೋಪಿಸಿ ಈ ಮೊದಲು ಅವರ ಸಹೋದರ ರಾಮಕೃಷ್ಣನ್ ಮತ್ತು ಕುಟುಂಬ ರಂಗಪ್ರವೇಶಿಸಿತ್ತು. ಮಣಿಯ ಗೆಳೆಯರಲ್ಲಿ ಕೆಲವರ ಮೇಲೆ ತನಗೆ ಸಂದೇಹವಿದೆ ಎಂದು ರಾಮಕೃಷ್ಣನ್ ಈ ಮೊದಲು ಹೇಳಿದ್ದರು. ಮಣಿಯ ಜೊತೆಗಿದ್ದವರು ಹಣಕ್ಕಾಗಿ ಬಳಸಿಕೊಂಡಿದ್ದಾರೆಂದು ಹೇಳಿದ್ದ ಅವರು ಈಗ ಮಣಿಯ ಕೊನೆಯ ಸ್ಟೇಜ್ ಶೋದ ಸಿಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಿರ್ದೇಶಕನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ತನ್ನ ಸಹೋದರನ ನಿಧನ ನಂತರವೂ ಹಣ ಮಾಡಲಾಗುತ್ತಿದೆ. ಬದುಕಿದ್ದಾಗ ಸ್ಟೇಜ್‌ಶೋಗೆ ಕರೆದು ಕೊಂಡು ಹೋಗಿ ಕಮೀಶನ್ ಪಡೆಯುತ್ತಿದ್ದ ವ್ಯಕ್ತಿ ಈಗ ನಿರ್ದೇಶಕ ವೇಷ ಹಾಕಿದ್ದಾನೆ ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಕಲಾಭವನ್ ಮಣಿಯ ಕೊನೆಯ ಸ್ಟೇಜ್ ಶೋ ಎಂಬ ಹೆಸರಿನಲ್ಲಿ ವೀಡಿಯೊವನ್ನು ಹೊರತಂದಿರುವ ಕಲಾಭವನ್ ಜಿಂಟೋ ವಿರುದ್ಧ ರಾಮಕೃಷ್ಣನ್‌ರ ಆಕ್ರೋಶ ಹರಿದಿದ್ದು, ಶ್ರೀಕೃಷ್ಣಪುರದ ಮಣಿಕುಲುಕ್ಕಂ ಎಂಬ ಹೆಸರಿನಲ್ಲಿ ಸಿಡಿ ಮತ್ತು ಡಿವಿಡಿಯನ್ನು ಜಿಂಟೋ ಹೊರತಂದಿದ್ದಾರೆ. ಇದು ಮಣಿಯ ಕೊನೆಯ ಕಾರ್ಯಕ್ರಮ ಎಂದು ಡಿವಿಡಿಯನ್ನು ಹೊರತಂದ ಅವರು ಹೇಳಿಕೊಂಡಿದ್ದಾರೆ.ಜಿಂಟೋ ಮಣಿಯ ಗೆಳೆಯರಲ್ಲಿ ಒಬ್ಬರು.
ಕಲಾಭವನ್ ಮಣಿಯ ಮರಣದ ಕುರಿತು ತಾನು ಮುಂದಿಟ್ಟಿರುವ ಸಂದೇಹಗಳು ಈಗಲೂ ಬಾಕಿ ಉಳಿದಿದೆ ಎಂದಿರುವ ರಾಮಕೃಷ್ಣನ್ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ತನಿಖೆಯನ್ನು ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.