ಬ್ರಹ್ಮರಕೊಟ್ಲು ಟೋಲ್‌ಗೇಟ್ ಸಿಬ್ಬಂದಿಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬಂಟ್ವಾಳ, ಮೇ 21: ಮತ್ತೆ ತಮ್ಮ ಕೌರ್ಯ ಮುಂದುವರಿಸಿದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ರಸ್ತೆಯಲ್ಲಿ ಎಳೆದಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರ ಸ್ವರೂಪದ ಗಾಯಗೊಂಡಿರುವ ಯುವಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲ್ಲಡ್ಕ ನಿವಾಸಿ ರಫೀಕ್(30) ಮಾರಣಾಂತಿಕ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಲೈನ್‌ಸೇಲ್ ಕೆಲಸ ಮಾಡುವ ರಫೀಕ್ ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಕಲ್ಲಡ್ಕದಿಂದ ಮಂಗಳೂರಿಗೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ರಹ್ಮರಕೊಟ್ಲು ಟೋಲ್‌ಗೇಟ್‌ನಲ್ಲಿ ನಿನ್ನೆ ರಾತ್ರಿ ಪಡೆದ ಟಿಕೆಟನ್ನು ಕಾರಿನ ಒಳಗೆಯಿಂದಲೇ ತೋರಿಸಿ ಮುಂದಕ್ಕೆ ಚಲಾಯಿಸಲು ಮುಂದಾದಾಗ ಟೋಲ್‌ಗೇಟ್ ಸಿಬ್ಬಂದಿಯೋರ್ವ ಕಬ್ಬಣದ ರಾಡ್‌ನಿಂದ ಕಾರಿಗೆ ಹಾನಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾರಿನಿಂದ ಕೆಳಗಿಳಿದು ಪ್ರಶ್ನಿಸಿದ ರಫೀಕ್‌ನನ್ನು ಟೋಲ್‌ಗೇಟ್ ಸಿಬ್ಬಂದಿಯರಾದ ಸಂತೋಷ್, ಶಿವ, ಕಾಶಿನಾಥ್ ಸೇರಿ ಒಟ್ಟು ಐವರ ತಂಡ ರಸ್ತೆಯಲ್ಲಿ ಎಳೆದಾಡಿ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ರಫೀಕ್‌ನನ್ನು ಪರಿಚಯಸ್ಥರೊಬ್ಬರು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.