ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮ
ಮಂಗಳೂರು, ಮೇ 21 : ದೇಶಕ್ಕಾಗಿ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ , ರಾಜೀವ್ ಗಾಂಧಿ ಅಪಾರ ತ್ಯಾಗ ಮಾಡಿದ್ದರೂ ಸಂಘಪರಿವಾರ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಇಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇಶಕ್ಕಾಗಿ ಕಾಂಗ್ರೆಸ್ ನಾಯಕರುಗಳು ಮಾಡಿದ ತ್ಯಾಗವನ್ನು ತಿದ್ದುವಂತಹ ಪ್ರಯತ್ನವನ್ನು ಮಾಡುತ್ತಿರುವ ಸಂಘಪರಿವಾರ ಬಂಡವಾಳಶಾಹಿಗಳಿಗೆ ದೇಶವನ್ನು ಸೂರೆ ಹೊಡೆಯಲು ಬಿಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಸಿವು ಮುಕ್ತ ಭಾರತ ಆಪೇಕ್ಷೆಯನ್ನು ಹೊಂದಿದ್ದರೆ ಬಿಜೆಪಿಯು ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿದೆ. ಬಿಜೆಪಿಗೆ ದೇಶದ ದುರ್ಬಲ ಜನರ ಸಂಕಷ್ಟವನ್ನು ನಿವಾರಿಸುವ ಚಿಂತನೆಯಿಲ್ಲ. ಬಿಜೆಪಿಯು ಕೇವಲ ಶ್ರೀಮಂತವರ್ಗಕ್ಕೆ ಲಾಭ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿರುತ್ತದೆ. ಬಿಜೆಪಿಗೆ ಶ್ರೀಮಂತರು ವೋಟ್ ಬ್ಯಾಂಕ್ ಆಗಿದ್ದರೆ ಕಾಂಗ್ರೆಸ್ ಪಕ್ಷ ಬಡವರ , ದುರ್ಬಲರ ಅಭಿವೃದ್ದಿಗಾಗಿ ಚಿಂತಿಸುತ್ತಿರುವುದರಿಂದ ಮತ್ತು ಅವರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವುದರಿಂದ ದುರ್ಬಲರು ಕಾಂಗ್ರೆಸ್ ಪಕ್ಷದ ವೋಟ್‌ಬ್ಯಾಂಕ್ ಆಗಿದ್ದಾರೆ ಎಂದರು.
ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ಸಂಸದರ ಮಾಜಿ ಕಾರು ಚಾಲಕ ಭಾಗಿಯಾಗಿದ್ದರೂ ಈ ಬಗ್ಗೆ ಯಾರು ಧ್ವನಿಯೆತ್ತುತ್ತಿಲ್ಲ. ಒಂದು ವೇಳೆ ಆರೋಪಿ ಕಾಂಗ್ರೆಸ್‌ನ ನಾಯಕರುಗಳ ಕಾರುಚಾಲಕನಾಗಿದ್ದರೆ ಬೀದಿ ರಂಪಾಟ ಮಾಡುತ್ತಿದ್ದರು.
ಸಂಘಪರಿವಾರ ಸುಳ್ಳನ್ನು ನೂರು ಬಾರಿ ಸತ್ಯ ಎಂದು ಹೇಳಿ ಸುಳ್ಳನ್ನು ಸತ್ಯ ಎಂದು ನಂಬಿಸುತ್ತಿದೆ. ಪಕ್ಷದ ಕಾರ್ಯಕರ್ತರು ಇದರ ವಿರುದ್ದ ಧ್ವನಿಯೆತ್ತಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್.ಲೋಬೋ,ಮೊಯ್ದಿನ್ ಬಾವ,ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಾಂಗ್ರೆಸ್ ಮುಖಂಡರುಗಳಾದ ಸದಾಶಿವ ಉಳ್ಳಾಲ್, ಟಿ.ಕೆ ಸುಧೀರ್, ಶುಭೋದಯ್ ಆಳ್ವ, ಅಪ್ಪಿ, ಪದ್ಮನಾಭ ನರಿಂಗಾನ, ಕೆ.ಅಶ್ರಫ್, ವಿಶ್ವಾಸ್‌ದಾಸ್, ಬಾಲಕೃಷ್ಣ ಶೆಟ್ಟಿ, ರಮಾನಂದ ಪೂಜಾರಿ, ಬಿಲಾಲ್ ಮೊಯ್ದಿನ್ ಉಪಸ್ಥಿತರಿದ್ದರು.