ಬಿಜೆಪಿ ಮುಕ್ತ ಭಾರತಕ್ಕೆ ಮತದಾರರ ಒಲವು: ಜನಾರ್ದನ ಪೂಜಾರಿ

Update: 2016-05-21 11:49 GMT

ಮಂಗಳೂರು, ಮೇ 21: ದೇಶದ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದ್ದ ಬಿಜೆಪಿಗೆ ಮತದಾರರು ತಕ್ಕ ಉತ್ತರ ನೀಡಿದ್ದು ಮತದಾರರು ಬಿಜೆಪಿ ಮುಕ್ತ ಭಾರತ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.

ನಗರದಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಎರಡನೆ ಸ್ಥಾನದಲ್ಲಿದೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಅಲ್ಲಿ ಮತಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್ ಹೆಚ್ಚು ಮತ ಗಳಿಸಿದೆ. ಕೇರಳ, ಪಶ್ಚಿಮಬಂಗಾಳ, ಪುದುಚೇರಿ, ತಮಿಳ್ನಾಡಿನಲ್ಲಿ ವಿಪಕ್ಷ ಸ್ಥಾನದಲ್ಲಿದೆ. ಬಿಜೆಪಿಯೂ ಕೇವಲ ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ದೊಡ್ಡ ರಾಜ್ಯವಾದ ಪಶ್ಚಿಮಬಂಗಾಲದಲ್ಲಿ ಕೇವಲ ಮೂರು ಸ್ಥಾನ ಪಡೆದರೆ, ಕೇರಳದಲ್ಲಿ ಒಂದು ಸ್ಥಾನವನ್ನು ಪಡೆದಿದೆ.

ತಮಿಳ್ನಾಡು, ಪುದುಚೇರಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಇದನ್ನು ಗಮನಿಸಿದರೆ ಮತದಾರರು ಬಿಜೆಪಿ ಮುಕ್ತ ಭಾರತ ಮಾಡಲು ಹೊರಟಿರುವುದು ಸ್ಪಷ್ಟವಾಗುತ್ತದೆ. ಆದರೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಪರಮೇಶ್ವರ್ ಅವರು ಫಲಿತಾಂಶ ದಿನ ಕಣ್ಣೀರು ಬಂತು ಅಂತ ಹೇಳಿದರು. ಅವರಿಗೆ ಬಿಜೆಪಿ ಮುಕ್ತ ಭಾರತವಾಗಿರುವುದಕ್ಕೆ ಕಣ್ಣೀರು ಬಂದಿರುವುದಾ ಎಂದು ಪ್ರಶ್ನಿಸಿದ ಅವರು ಪರಮೇಶ್ವರ್ ತೂಕದ ಮಾತನಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡುವುದು ಬಿಟ್ಟು ಪಕ್ಷದ ನಾಯಕತ್ವಕ್ಕೆ ಪ್ರಿಯಾಂಕಗಾಂಧಿ, ರಾಹುಲ್ ಗಾಂಧಿಯನ್ನು ತರಬೇಕು. ಸೋನಿಯಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೇ ಇರಲಿ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಮುನ್ನೆಲೆಗೆ ತರಲಿ. ಪ್ರಿಯಾಂಕಗಾಂಧಿಯವರಲ್ಲಿ ಜನರು ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನು ಕಾಣುತ್ತಿದ್ದು ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಹೇಳಿದರು.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿದ ಅವರು ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿ. ಆದರೆ ಅವರು ಈ ಬಗ್ಗೆ ಆರೋಪ ಮಾಡಿರುವವರನ್ನು ಹುಚ್ಚನೆಂದು, ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸುವುದಾಗಿ ಹೇಳಿದ್ದಾರೆ. ಇಂತಹ ಮಾತುಗಳನ್ನು ಕೇಳಿಸಿಕೊಂಡ ಅವರು ಮಾನನಷ್ಟ ಪ್ರಕರಣ ದಾಖಲಿಸದೆ ಇರುವುದಿಲ್ಲ. ಖಾದರ್ ಅವರು ತೂಕದ ಮಾತುಗಳನ್ನು ಆಡಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ಚಂದ್ರ, ಟಿ.ಕೆ ಸುಧೀರ್, ಶುಭೋದಯ್ ಆಳ್ವ, ಅಜಿತ್‌ಕುಮಾರ್, ಅಪ್ಪಿ, ರಮಾನಂದ್ ಪೂಜಾರಿ,ಸರಳ ಕರ್ಕೆರಾ, ಕರುಣಾಕರ್ ಶೆಟ್ಟಿ, ನೀರಜ್ ಪಾಲ್, ದೀಪಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News