ಗರ್ಭಿಣಿಗೆ ವರದಕ್ಷಿಣೆ ಕಿರುಕುಳ ಆರೋಪ: ಅತ್ತೆ, ಮಾವ, ನಾದಿನಿ ವಿರುದ್ಧ ಪ್ರಕರಣ ದಾಖಲು

Update: 2016-05-21 12:38 GMT

ಪುತ್ತೂರು, ಮೇ 21: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿ ಗರ್ಭಿಣಿ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಗರ್ಭಿಣಿ ಮಹಿಳೆಯ ಪತಿ,ಮಾವ,ಅತ್ತೆ ಹಾಗೂ ನಾದಿನಿಯ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಾರಾಯಣ ಭಟ್ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಭಾರ್ಗವ, ಬೆಂಗಳೂರು ಮೊದಲನೆ ಮುಖ್ಯರಸ್ತೆಯ ಪರಪ್ಪನ ಅಗ್ರಹಾರ ಹೊಸ ರಸ್ತೆಯ ಗಣೇಶ್ ಎಂಬವರ ಪುತ್ರಿ ಪ್ರಿಯರನ್ನು 2012ರಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಬೆಂಗಳೂರಿನ ಆರ್.ಟಿ.ನಗರದಲ್ಲಿ ವಾಸ್ತವ್ಯವಿದ್ದರು. ಕೆಲ ಸಮಯದ ಬಳಿಕ ಸ್ವಂತ ಉದ್ಯೋಗ ನಡೆಸಲು ಹಣದ ಅವಶ್ಯಕತೆಯಿದೆ ಎಂದು ಹೇಳಿ ಪತ್ನಿಯ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದರು.

ಇದೀಗ ಮತ್ತೆ ಸ್ವಂತ ಉದ್ಯೋಗ ನಡೆಸಲು ಹಣದ ಅವಶ್ಯಕತೆಯಿದೆ ಎಂದು ಹೇಳಿ ತವರು ಮನೆಯಿಂದ ಹಣ ತರುವಂತೆ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆಯಲ್ಲಿರುವ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ನಾನು ಎಂಟು ತಿಂಗಳ ಗರ್ಭಿಣಿಯಾಗಿದ್ದ ವೇಳೆ ಮನೆಯವರ ಕಿರುಕುಳದಿಂದ ನನ್ನ ಮಗುವಿನ ಸಾವಿಗೂ ಅವರು ಕಾರಣರಾಗಿದ್ದಾರೆ ಎಂದು ಆರೋಪಿಸಿ ತನ್ನ ಪತಿ ಭಾರ್ಗವ, ಮಾವ ನಾರಾಯಣ ಭಟ್, ಅತ್ತೆ ಕಮಲ ಹಾಗೂ ನಾದಿನಿ ಅಶ್ವಿನಿ ವಿರುದ್ಧ ಪ್ರಿಯಾ ಬೆಂಗಳೂರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣವನ್ನು ಸಂಪ್ಯ ಪೊಲೀಸರಿಗೆ ಹಸ್ತಾಂತರಿಸಿದ್ದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News